ಚಿತ್ರದುರ್ಗದಲ್ಲಿ 5 ಅಸ್ಥಿಪಂಜರ ಪತ್ತೆ‌ ಪ್ರಕರಣ-2019ರಲ್ಲೇ ನಿದ್ರೆ ಮಾತ್ರೆ‌ ಸೇವಿಸಿ ಸಾಮೂಹಿಕ ಆತ್ಮಹತ್ಯೆ-ಎಫ್‌ಎಸ್‌ಎಲ್‌ ವರದಿ

ಮಂಗಳೂರು(ಚಿತ್ರದುರ್ಗ): ನಗರದ ಹೊರವಲಯದ ಪಾಳು ಬಿದ್ದ ಮನೆಯಲ್ಲಿ ದೊರೆತಿದ್ದ ಐದು ಅಸ್ಥಿ ಪಂಜರ ಪ್ರಕರಣದ ಗೊಂದಲ ಬಗೆಹರಿದಿದ್ದು, ನಿವೃತ್ತ ಎಂಜಿನಿಯರ್‌ ಜಗನ್ನಾಥ ರೆಡ್ಡಿ ಕುಟುಂಬ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದು ದೃಢಪಟ್ಟಿದೆ.

ಗುರುವಾರ ಚಿತ್ರದುರ್ಗ ಪೊಲೀಸರ ಕೈ ಸೇರಿದ ಎಫ್‌ಎಸ್‌ಎಲ್‌ ರಿಪೋರ್ಟ್‌ನಲ್ಲಿ ಈ ಕುರಿತ ಉಲ್ಲೇಖವಿದೆ. ಪಾಳು ಬಿದ್ದ ಮನೆಯಲ್ಲಿ ಕಳೆದ ಡಿ.28 ರಂದು ಐವರ ಅಸ್ಥಿ ಪಂಜರಗಳು ದೊರೆತಿದ್ದವು. ಜಗನ್ನಾಥರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣರೆಡ್ಡಿ, ನರೇಂದ್ರ ರೆಡ್ಡಿ ಅವರ ಅಸ್ಥಿ ಪಂಜರಗಳಾಗಿದ್ದವು. ಖಿನ್ನತೆಗೆ ಒಳಗಾಗಿದ್ದ ಜಗನ್ನಾಥರೆಡ್ಡಿ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿತ್ತು. ಮಗನ ಮದುವೆ, ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಕುಟುಂಬ ಬಳಲಿತ್ತು. ಐದಾರು ವರ್ಷಗಳಿಂದ ನೆಂಟರು, ಸಂಬಂಧಿಕರು, ಸ್ನೇಹಿತರ ಸಂಪರ್ಕವನ್ನೂ ಕಡಿದುಕೊಂಡಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಎಸ್‌ಪಿ ಧರ್ಮೇಂದರ್ ಕುಮಾರ್ ಮೀನಾ, ಎಫ್‌ಎಸ್‌ಎಲ್‌ ತಂಡ ಮನೆಯಿಂದ 71 ಸಾಕ್ಷ್ಯಗಳನ್ನು ಕಲೆ ಹಾಕಿತ್ತು. ಎಲ್ಲಾ ಸ್ಯಾಂಪಲ್ಸ್‌ಗಳನ್ನು ದಾವಣಗೆರೆ, ಬೆಂಗಳೂರು ಲ್ಯಾಬೊರೆಟರಿಗೆ ಕಳುಹಿಸಲಾಗಿತ್ತು. ದೇಹಗಳ ಯಾವುದೇ ಭಾಗದಲ್ಲಿ ಗಾಯದ ಗುರುತುಗಳು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ. ಅಸ್ಥಿಪಂಜರದ ಸ್ಯಾಂಪಲ್ ಗಳಲ್ಲಿ ನಿದ್ದೆ ಮಾತ್ರೆಗಳು ಸೇವನೆ ಮಾಡಿರುವ ಮಾಹಿತಿ ಸಿಕ್ಕಿದೆ. ಅಡುಗೆ ಮನೆಯಲ್ಲಿದ್ದ 2 ಪಾತ್ರೆಗಳಲ್ಲಿ ಸೈನೈಡ್ ಸಿಕ್ಕಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಮೃತರ್‍ಯಾರೂ ಸೈನೈಡ್ ಸೇವಿಸಿರುವುದು ಕಂಡು ಬಂದಿಲ್ಲ. ತನಿಖೆ ಪ್ರಕಾರ ಫೆಬ್ರವರಿ ಇಲ್ಲವೇ ಮಾರ್ಚ್ 2019ರಲ್ಲಿ ಇವರೆಲ್ಲ ಸಾವಿಗೀಡಾಗಿದ್ದಾರೆ ಎಂದು ಎಸ್‌ಪಿ ತಿಳಿಸಿದರು. ಸಾವಿನ ಸುತ್ತ ಮತ್ತೇನಾದರೂ ಇರಬಹುದಾ ಎಂಬ ಕಾರಣಕ್ಕೆ ತನಿಖೆಯನ್ನು ಸಿಪಿಐ ನೇತೃತ್ವದಲ್ಲಿ ಮುಂದುವರಿಸಲಾಗಿದೆ ಎಂದು ಎಸ್ಪಿ ಧರ್ಮೇಂದರ್ ಕುಮಾರ್‌ ಮೀನಾ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here