ಮಂಗಳೂರು(ರಾಜಸ್ಥಾನ): ಸಂಬಂಧಿಕರ ಮದುವೆ ಸಂಭ್ರಮದಲ್ಲಿದ್ದ ದಂಪತಿಗೆ ತಮ್ಮ ಎರಡನೇ ಮಗು ಎಲ್ಲಿದೆ ಎಂಬುದನ್ನೇ ಮರೆತ ಪರಿಣಾಮ ಮಗು ಉಸಿರುಗಟ್ಟಿ ಕಾರಲ್ಲೇ ಕೊನೆಯುಸಿರೆಳೆದ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.
ಕಾರು ಪಾರ್ಕ್ ಮಾಡಿದ ದಂಪತಿ ಮಂಟಪಕ್ಕೆ ತೆರಳಿ ಮುದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಮದುವೆ ಮುಗಿಸಿ, ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಮಗಳ ನೆನಪಾಗಿದೆ. ಮಂಟಪದಲ್ಲಿ ಹುಡುಕಿದ್ದಾರೆ. ಸಿಗಲಿಲ್ಲ. ಕೊನೆಗೆ ಓಡೋಡಿ ಕಾರಿನತ್ತ ಧಾವಿಸಿದ್ದಾರೆ. ಲಾಕ್ ಮಾಡಿ ಹೋದ ಕಾರಿನ ಹಿಂಬದಿ ಸೀಟಿನಲ್ಲಿ ಮಗು ಉಸಿರುಗಟ್ಟಿ ಪ್ರಾಣ ಬಿಟ್ಟಿದೆ. ಪ್ರದೀಪ್ ನಾಗರ್ ತನ್ನ ಪತ್ನಿ ಇಬ್ಬರು ಮಕ್ಕಳೊಂದಿಗೆ ಮದುವೆಗೆ ತೆರಳಿದ್ದಾರೆ. ಮುಂಭಾಗದ ಸೀಟಿನಲ್ಲಿ ಪತ್ನಿ ಕುಳಿತುಕೊಂಡರೆ, ಹಿಂಬದಿ ಸೀಟಿನಲ್ಲಿ ಮೂರು ವರ್ಷದ ಪುತ್ರಿ ಗೋರ್ವಿಕಾ ನಾಗರ್‌ಳನ್ನು ಮಕ್ಕಳ ಸೀಟಿನಲ್ಲಿ ಮಲಗಿಸಿದ್ದರು. ಇತ್ತ ಪುಟ್ಟ ಕಂದಮ್ಮನ ಜತೆ ಆಕೆಯ ಪುಟ್ಟ ಅಕ್ಕ ಕುಳಿತಿದ್ದಳು. ಮದುವೆ ಮಂಟಪದ ಮಂಭಾಗಕ್ಕೆ ಆಗಮಿಸಿದ ಪ್ರದೀಪ್ ನಾಗರ್ ಕಾರು ನಿಲ್ಲಿಸಿದ್ದಾರೆ. ಈ ವೇಳೆ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಪತ್ನಿ ಹಾಗೂ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಪುಟ್ಟ ಮಗಳು ಕಾರಿನಿಂದ ಇಳಿದಿದ್ದಾರೆ.
ಇತ್ತ ಪ್ರದೀಪ್ ನಾಗರ್ ಕಾರನ್ನು ಪಾರ್ಕಿಂಗ್ ಮಾಡಲು ತೆರಳಿದ್ದಾರೆ. 3 ವರ್ಷದ ಗೋರ್ವಿಕಾ ನಾಗರ್‌ಳನ್ನು ಪತಿ ಪ್ರದೀಪ್ ಎತ್ತಿಕೊಂಡು ಬರಲಿದ್ದಾರೆ ಎಂದು ಪತ್ನಿ ಭಾವಿಸಿ ಮತ್ತೊಬ್ಬಳ ಮಗಳ ಕೈಹಿಡಿದು ಮದುವೆ ಮಂಟಪಕ್ಕೆ ತೆರಳಿದ್ದಾಳೆ. ಇತ್ತ ಪತಿ ಪ್ರದೀಪ್ ನಾಗರ್ ಕಾರು ಪಾರ್ಕಿಂಗ್ ಮಾಡಿ ಲಾಕ್ ಮಾಡಿ ಮದುವೆಗೆ ಆಗಮಿಸಿದ್ದಾರೆ. ಮದುವೆಯಲ್ಲಿ ಎಲ್ಲಾ ಆಪ್ತರ ಜತೆ ಮಾತುಕತೆ, ಹರಟೆ ನಡೆದಿದೆ. ಮದುವೆ ಊಟ ಮುಗಿಸಿದ ಬಳಿಕ ಮಗು ಎಲ್ಲಿ ಎಂದು ಪ್ರದೀಪ್ ನಾಗರ್‌ನನ್ನು ಪತ್ನಿ ಕೇಳಿದ್ದಾಳೆ. ನೀನು ಇಳಿಯುವಾಗ ಕರೆದುಕೊಂಡು ಬಂದಿಲ್ವಾ ಎಂದು ಪ್ರಶ್ನಿಸಿದ್ದಾಳೆ. ಗೊಂದಲ, ಆತಂಕ ಶುರುವಾಗಿದೆ. ಓಡೋಡಿ ಬಂದು ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರು ಪರಿಶೀಲಿಸಿದಾಗ ಮಗು ಉಸಿರಾಡಲು ಗಾಳಿ ಸಿಗದೆ ಪ್ರಾಣ ಬಿಟ್ಟಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಆಸ್ಪತ್ರೆಗೆ ದೌಡಾಯಿಸಿದರೂ ಪ್ರಯೋಜನವಾಗಿಲ್ಲ. ತಪಾಸಣೆ ನಡೆಸಿದ ವೈದ್ಯರು ಅದಾಗಲೇ ಮಗು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.