ಜಾರಿ ನಿರ್ದೇಶನಾಲಯದ ಬಂಧನ ಅಧಿಕಾರಕ್ಕೆ ಸುಪ್ರೀಂ ಕೋರ್ಟ್ ಕಡಿವಾಣ

ಮಂಗಳೂರು(ದೆಹಲಿ): ಅಕ್ರಮ ಹಣಕಾಸು ವರ್ಗಾವಣೆ ತಡೆ ಕಾನೂನಿನ ಸೆಕ್ಷನ್ 19ರ ಅಡಿಯಲ್ಲಿ ಆರೋಪಿಯನ್ನು ಬಂಧಿಸುವ ಜಾರಿ ನಿರ್ದೇಶನಾಲಯ ಬಂಧನ ಅಧಿಕಾರಕ್ಕೆ ಸುಪ್ರೀಂ ಕೋರ್ಟ್ ಕಡಿವಾಣ ಹಾಕಿದೆ.

ದೂರನ್ನು ಪರಿಗಣಿಸಿ ವಿಶೇಷ ಕೋರ್ಟ್ ನಿರ್ದೇಶನದ ಮೇರೆಗೆ ಆರೋಪಿ ಆ ಕೋರ್ಟ್ ಮುಂದೆ ಹಾಜರಾದಲ್ಲಿ ಅವರನ್ನು ಜಾರಿ ನಿರ್ದೇಶನಾಲಯ ಬಂಧನ ಮಾಡುವಂತಿಲ್ಲ. ಇಂತಹ ಸಂದರ್ಭದಲ್ಲಿ ಇಡಿ ಸಂಬಂಧಿತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಅನುಮತಿಯನ್ನು ಪಡೆದು ನಂತರ ಬಂಧಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾ. ಅಭಯ ಶ್ರೀನಿವಾಸ ಓಕಾ ಮತ್ತು ನ್ಯಾ. ಉಜ್ವಲ್ ಭುಯಾನ್ ಅವರಿದ್ದ ಸುಪ್ರೀಂ ಕೋರ್ಟ್‌ ನ್ಯಾಯಪೀಠ ಈ ತೀರ್ಪು ನೀಡಿದೆ.

ಅಪರಾಧವನ್ನು ಪರಿಗಣಿಸಿದ ನಂತರ, ದೂರಿನಲ್ಲಿ ಆರೋಪಿ ಎಂದು ತೋರಿಸಲಾದ ವ್ಯಕ್ತಿಯನ್ನು ಬಂಧಿಸುವ ಅಧಿಕಾರ ಇ.ಡಿ. ಮತ್ತು ಅದರ ಅಧಿಕಾರಿಗಳಿಗೆ ಇರುವುದಿಲ್ಲ. ಸೆಕ್ಷನ್ 19ರನ್ವಯ ಅಂತಹ ಅಧಿಕಾರ ಚಲಾಯಿಸುವ ಅವಕಾಶವನ್ನು ಅವರು ಕಳೆದುಕೊಳ್ಳುತ್ತಾರೆ ಎಂದು ನ್ಯಾಯಪೀಠ ಹೇಳಿದೆ. ಆದರೂ, ಕಸ್ಟಡಿ ಕೋರಿ ಇ.ಡಿ. ಅರ್ಜಿ ಸಲ್ಲಿಸಿದರೆ, ಆಗ ಆರೋಪಿಯ ವಿಚಾರಣೆ ನಡೆಸಿ ವಿಶೇಷ ನ್ಯಾಯಾಲಯವು ಸಂಕ್ಷಿಪ್ತ ಕಾರಣಗಳನ್ನು ದಾಖಲಿಸಿ ಇ.ಡಿ. ಅರ್ಜಿಯ ಮೇಲೆ ಸೂಕ್ತ ಆದೇಶ ಹೊರಡಿಸಬಹುದು ಎಂದು ಅದು ಅಭಿಪ್ರಾಯಪಟ್ಟಿದೆ. ಆರೋಪಿಯನ್ನು ಸೆಕ್ಷನ್ 19ರಡಿ ಯಾವತ್ತೂ ಬಂಧಿಸಿಲ್ಲವಾದರೂ ಕಸ್ಟಡಿ ವಿಚಾರಣೆ ಅಗತ್ಯ ಎಂದು ಮನವರಿಕೆಯಾದರೆ ಮಾತ್ರವೇ ಕೋರ್ಟ್ ಆರೋಪಿಯನ್ನು ಇ.ಡಿ. ಕಸ್ಟಡಿಗೆ ಒಪ್ಪಿಸಲು ಅನುಮತಿ ನೀಡಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 88ರ ಅಡಿಯಲ್ಲಿ ಕೋರ್ಟ್‌ ಮುಂದೆ ಹಾಜರಾಗಿದ್ದನ್ನು ತೋರಿಸಲು ಆರೋಪಿಯು ನೀಡುವ ಬಾಂಡ್, ಜಾಮೀನು ಕೋರಲು ಸಲ್ಲಿಸುವ ಅರ್ಜಿಗೆ ಸಮನಾಗುತ್ತದೆಯೇ ಎನ್ನುವುದು ಸುಪ್ರೀಂ ಕೋರ್ಟ್ ಮುಂದಿದ್ದ ಪ್ರಶ್ನೆಯ ಸಾರವಾಗಿತ್ತು. ಅರ್ಜಿಯನ್ನು ವಜಾ ಮಾಡಿದ ಎರಡು ತಿಂಗಳ ನಂತರ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪನ್ನು ನೀಡಿದೆ. ಬಂಧನಕ್ಕೆ ಕಾರಣಗಳನ್ನು ಆರೋಪಿಗೆ ಇ.ಡಿ. ಲಿಖಿತವಾಗಿ ನೀಡಬೇಕಾಗುತ್ತದೆ ಎಂಬ ಹಿಂದಿನ ತೀರ್ಪೊಂದರ ಮರುಪರಿಶೀಲನೆ ಕೋರಿದ್ದ ಅರ್ಜಿಯನ್ನು ಕೋರ್ಟ್ ಎರಡು ತಿಂಗಳ ಹಿಂದೆ ವಜಾ ಮಾಡಿತ್ತು. ಮರುಪರಿಶೀಲನೆ ಮಾಡಬೇಕಾದಂತಹ ದೋಷ/ ತಪ್ಪೇನೂ ಅದರಲ್ಲಿ ಇಲ್ಲ ಎಂದು ನ್ಯಾಯಪೀಠ ಹೇಳಿತ್ತು. ಸೆಕ್ಷನ್ 50ರ ಅಡಿಯಲ್ಲಿ ನೀಡಲಾದ ಸಮನ್ಸ್‌ಗೆ ಪ್ರತಿಯಾಗಿ ಸಹಕರಿಸಲು ಒಪ್ಪುತ್ತಿಲ್ಲ ಎಂದ ಮಾತ್ರಕ್ಕೆ ಆರೋಪಿ ಆತ ಯಾ ಆಕೆ ಸೆಕ್ಷನ್ 19ರಡಿ ಬಂಧನಕ್ಕೆ ಅರ್ಹರಾಗುತ್ತಾರೆ ಎನ್ನುವುದಕ್ಕೆ ಕಾರಣವಾಗದು ಎಂದು ಕೋರ್ಟ್ ಹೇಳಿತ್ತು.

ಏನಿದು ಸೆಕ್ಷನ್ 19 ?:
ತಮ್ಮಲ್ಲಿ ಇರುವ ಪುರಾವೆಗಳ ಆಧಾರದಲ್ಲಿ ಆರೋಪಿಯನ್ನು ಬಂಧಿಸಲು ಅಕ್ರಮ ಹಣಕಾಸು ವರ್ಗಾವಣೆ ತಡೆ ಕಾನೂನಿನ ಸೆಕ್ಷನ್ 19 ಇ.ಡಿ. ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ. ವ್ಯಕ್ತಿಯೊಬ್ಬರು ಕಾನೂನಿನಡಿ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ ಎಂದು ಶಂಕಿಸಲು ಸಕಾರಣ ಆಧಾರ ಒದಗಿಸಬೇಕಾಗುತ್ತದೆ.

LEAVE A REPLY

Please enter your comment!
Please enter your name here