ಮಂಗಳೂರು: ಜಾಹೀರಾತು ಮೂಲಕ ವೈರಲ್ ಆಗಿದ್ದ ‘ಪ್ರೇತ ಮದುವೆ’ ಕೊನೆಗೂ ಫಿಕ್ಸ್ ಆಗಿದೆ. ಆಟಿ ತಿಂಗಳಲ್ಲಿ ಪ್ರೇತ ಮದುವೆ ನಡೆಯಲಿದೆ.
ಪುತ್ತೂರಿನ ಪ್ರೇತ ವಧುವಿಗೆ ‘ಪ್ರೇತ ವರ ಬೇಕಾಗಿದೆ’ ಎಂಬ ಜಾಹೀರಾತು ಭಾರೀ ಸದ್ದು ಮಾಡಿತ್ತು. ಈಗ ಕಾಸರಗೋಡು ಸಮೀಪದ ಬಾಯಾರು ಕಡೆಯ ‘ವರ’ ನೊಂದಿಗೆ ಮದುವೆ ನಿಗದಿಯಾಗಿದ್ದು, ಮುಂದಿನ ‘ಆಟಿ’ ತಿಂಗಳಲ್ಲಿ ಪ್ರೇತ ಮದುವೆ ನಡೆಯಲಿದೆ. ಸುಮಾರು 30 ವರ್ಷಗಳ ಹಿಂದೆ ಒಂದು ವಾರದ ಶಿಶು ತೀರಿ ಹೋಗಿತ್ತು. ನಾಮಕರಣವೂ ಆಗಿರಲಿಲ್ಲ. ಆ ವ್ಯಕ್ತಿಗೆ ಈಗ ‘ಪ್ರೇತ ಮದುವೆ’ ಮಾಡಲು ನಿರ್ಧರಿಸಲಾಗಿದೆ. ‘30 ವರ್ಷದ ಹಿಂದೆ ತೀರಿ ಹೋದಾಕೆಗೆ ಪ್ರೇತ ವರ ಬೇಕಾಗಿದೆ’ ಎಂದು ಪತ್ರಿಕೆಯಲ್ಲಿ ಜಾಹೀರಾತು ಹಾಕಿದ್ದನ್ನು ಗಮನಿಸಿದ ಬಾಯಾರು ಸಮೀಪದ ನಿವಾಸಿ ಸಂಬಂಧಪಟ್ಟವರಿಗೆ ಕರೆಮಾಡಿ ಮಾತನಾಡಿದ್ದಾರೆ. ಅದೇ ಮೊದಲ ಕರೆಯಾಗಿತ್ತು. ನಂತರ ಸುಮಾರು 30ಕ್ಕೂ ಅಧಿಕ ಸಂಬಂಧ ಬಂದರೂ ಪ್ರಶ್ನಾಚಿಂತನೆಯಲ್ಲಿ ಅವಲೋಕಿಸಿದಾಗ ಬಾಯಾರುವಿನ ಸಂಬಂಧವೇ ಅಂತಿಮವಾಗಿತ್ತು.
ಜೀವಂತ ಇರುವಾಗ ಆಗದೇ ಇರುವ ಮದುವೆ ಕ್ರಮವನ್ನು ಜೀವಂತ ಇರುವ ಕುಟುಂಬ ಸದಸ್ಯರೆಲ್ಲರೂ ಸೇರಿ ಸಾಂಕೇತಿಕವಾಗಿ ನಡೆಸುತ್ತಾರೆ. ಮುಂದಿನ ಭಾನುವಾರದಂದು ‘ಪ್ರೇತ ವರ’ನ ಕಡೆಯವರು ‘ವಧು’ವಿನ ಮನೆಗೆ ಬರಲಿದ್ದು, ಬಳಿಕ ವಧುವಿನ ಮನೆಯವರು ವರನ ಮನೆಗೆ ಹೋಗಲಿದ್ದಾರೆ. ಬಳಿಕ ನಿಶ್ಚಿತಾರ್ಥ ನಡೆದು. ಆಟಿಯಲ್ಲಿ ಮದುವೆಯೂ ನಡೆಯಲಿದೆ.