ಮಂಗಳೂರು(ಹುಬ್ಬಳ್ಳಿ): ದಿ ರಾಮೇಶ್ವರ ಕೆಫೆ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ನಿನ್ನೆ ಬೆಂಗಳೂರು ಸೇರಿದಂತೆ 11 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಎನ್ಐಎ ಅಧಿಕಾರಿಗಳು ಹುಬ್ಬಳ್ಳಿಯ ಸಹೋದರಿಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಹುಬ್ಬಳ್ಳಿಯ ಗೌಸಿಯಾ ಟೌನ್ ನಿವಾಸಿ, ಸಾಫ್ಟ್ವೇರ್ ಇಂಜಿನಿಯರ್ ಶೋಯೆಬ್ ಮಿರ್ಜಾ ಹಾಗೂ ಆತನ ಸಹೋದರ ಅಜೀಬ್ ನನ್ನು ಈ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಇವರಿಬ್ಬರೂ ವಿದೇಶಿ ಹ್ಯಾಂಡ್ಲರ್ ಗಳ ಸೂಚನೆಯಂತೆ ರಾಮೇಶ್ವರಂ ಕೆಫೆ ಸ್ಫೋಟದ ಪ್ರಮುಖ ಆರೋಪಿಗಳಾದ ಅಬ್ದುಲ್ ಮತೀನ್ ತಾಹ ಹಾಗೂ ಮುಸಾವೀರ್ ಹುಸೇನ್ಗೆ ಹಣ ಸಹಾಯ ಮಾಡಿದ್ದಾರೆ ಎಂಬ ಮಾಹಿತಿ ಎನ್ಐಎ ಅಧಿಕಾರಿಗಳಿಗೆ ಲಭ್ಯವಾದ ಹಿನ್ನಲೆ ಸಹೋದರರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಸಹೋದರರಿಬ್ಬರು ಹಣ ಸಹಾಯ ಮಾಡಿದ್ದ ಬಗ್ಗೆ ಕೆಲ ಡಿಜಿಟಲ್ ಸಾಕ್ಷ್ಯಗಳು ಎನ್ಐಎ ಅಧಿಕಾರಿಗಳಿಗೆ ದೊರೆತಿದೆ. ಹಣ ಸಹಾಯದ ಬಗ್ಗೆ ಸಹೋದರರು ವಿದೇಶಿ ಹ್ಯಾಂಡ್ಲರ್ನ ಜೊತೆ ಕೋಡ್ ವರ್ಡ್ನಲ್ಲಿ ಚಾಟಿಂಗ್ ಮಾಡಿದ್ದಾರೆ. ಇನ್ನು ರಾಮೇಶ್ವರಂ ಕೆಫೆ ಸ್ಫೋಟ ಬಳಿಕ ಆರೋಪಿ ಮುಸಾವೀರ್ ಹುಬ್ಬಳ್ಳಿಗೆ ಭೇಟಿ ನೀಡಿ, ಇಲ್ಲಿ ಹಣ ಪಡೆದು ಪಶ್ಚಿಮ ಬಂಗಾಳಕ್ಕೆ ತೆರಳಿರುವ ಅನುಮಾನ ಅಧಿಕಾರಿಗಳಿಗೆ ಮೂಡಿದೆ. ಹೀಗಾಗಿ ಇವರಿಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.