ಮಂಗಳೂರು(ಉತ್ತರ ಪ್ರದೇಶ): ಸುಡುವ ಬಿಸಿಲಿನಲ್ಲಿ ಮೂರು ದಿನದಿಂದ ಧ್ಯಾನಮಗ್ನರಾಗಿದ್ದ 70 ವರ್ಷದ ಸ್ವಾಮೀಜಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಉತ್ತರ ಪ್ರದೇಶದ ಅಮೇಥಿ ಮೂಲದ ಕಮ್ಲಿವಾಲೆ ಪಾಗಲ್ ಬಾಬಾ ಮೃತ ಸ್ವಾಮೀಜಿ. ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಮೂರು ದಿನ ಮಹಾ ಧ್ಯಾನ ಮಾಡಲು ಮುಂದಾಗಿ ಕೊನೆಯುಸಿರೆಳೆದಿದ್ದಾರೆ.
ಸ್ವಾಮೀಜಿ ಮೇ 23ರಿಂದ ಮೇ 27ರವರೆಗೆ ಕೈಲಾ ದೇವಿ ಪೊಲೀಸ್ ಠಾಣಾ ವ್ಯಾಪ್ತಿಯ ಬೇನಿಪುರದಲ್ಲಿ ಪಂಚಾಗ್ನಿ ತಪಸ್ಸಿನ ಹೆಸರಿನಲ್ಲಿ ಧ್ಯಾನಮಗ್ನರಾಗಿದ್ದರು. ಈ ತಪಸ್ಸು ಆಚರಣೆಗೆ ಸ್ವಾಮೀಜಿಗಳು ಸ್ಥಳೀಯ ಪೊಲೀಸರಿಂದ ಅನುಮತಿ ಪಡೆದುಕೊಂಡಿದ್ದರು ಎಂದು ಸಂಭಾಲ್‌ನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ವಿನಯ್ ಕುಮಾರ್ ಮಿಶ್ರಾ ಮಾಹಿತಿ ನೀಡಿದ್ದಾರೆ. ಪಂಚಾಗ್ನಿ ತಪಸ್ಸನ್ನು ಬಯಲು ಪ್ರದೇಶದಲ್ಲಿ ಆಚರಣೆ ಮಾಡಲಾಗುತ್ತದೆ. ಸ್ವಾಮೀಜಿಗಳ ಸುತ್ತಲೂ ಬೆಂಕಿ ಹಾಕಲಾಗುತ್ತದೆ. ಬೆಂಕಿ ಮಧ್ಯೆ ಕುಳಿತುಕೊಳ್ಳುವ ಸ್ವಾಮೀಜಿಗಳು ಕದಲದೇ ಮೂರು ದಿನ ಧ್ಯಾನ ಮಾಡುತ್ತಾರೆ. ಇದನ್ನು ಪಂಚಾಗ್ನಿ ತಪಸ್ಸು ಎಂದು ಕರೆಯಲಾಗುತ್ತದೆ.
ಪಂಚಾಗ್ನಿ ತಪಸ್ಸಿನ ವೇಳೆ ಸ್ವಾಮೀಜಿಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಭಾನುವಾರ ಆರೋಗ್ಯ ತುಂಬಾ ಕ್ಷೀಣಿಸಿದ ಕಾರಣ ಅವರ ಭಕ್ತರು ಸ್ವಾಮೀಜಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದರು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಸ್ವಾಮೀಜಿ ಕೊನೆಯುಸಿರೆಳೆದರು ಎಂದು ವಿನಯ್ ಕುಮಾರ್ ಮಿಶ್ರಾ ಹೇಳಿದ್ದಾರೆ. ಕಮ್ಲಿವಾಲಾ ಪಾಗಲ್ ಬಾಬಾ ಈ ಪಂಚಾಗ್ನಿ ತಪಸ್ಸು ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 23 ಬಾರಿ ಪಂಚಾಗ್ನಿ ತಪಸ್ಸು ಆಚರಣೆಯಲ್ಲಿ ಭಾಗಿಯಾಗಿದ್ದರು. ಕಮ್ಲಿವಾಲೆ ಪಾಗಲ್ ಬಾಬಾ ವಿಶ್ವಶಾಂತಿ ಮತ್ತು ಸಮಾಜವನ್ನು ಮಾದಕ ವ್ಯಸನದಿಂದ ಮುಕ್ತ ಮಾಡುವ ಉದ್ದೇಶದಿಂದ ತಪಸ್ಸು ಆಚರಣೆಗೆ ಮುಂದಾಗಿದ್ದರು. ಜಾಗತಿಕ ತಾಪಮಾನ, ಗೋವುಗಳ ರಕ್ಷಣೆ, ರಾಷ್ಟ್ರೀಯ ಮಾದಕ ವ್ಯಸನ ಅಭಿಯಾನ ಮತ್ತು ವಿಶ್ವ ಶಾಂತಿ ಮತ್ತು ಕಲ್ಯಾಣಕ್ಕಾಗಿ ಸ್ವಾಮೀಜಿಗಳು ಧ್ಯಾನ ಮಾಡುತ್ತಿದ್ದರು ಎಂದು ಕಮ್ಲಿವಾಲೆ ಪಾಗಲ್ ಬಾಬಾ ಅವರ ಅನುಯಾಯಿಗಳು ಹೇಳಿದ್ದಾರೆ.