ಮಂಗಳೂರು: ಕಂಕನಾಡಿ ಮಸೀದಿ ಪಕ್ಕದ ರಸ್ತೆಯಲ್ಲಿ ನಮಾಜು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ತುಷ್ಟೀಕರಣ ನೀತಿಯನ್ನು ಮುಂದುವರಿಸಿ ಕೇಸು ಹಿಂದಕ್ಕೆ ಪಡೆದಿದೆ. ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿಯನ್ನು ನಿರಂತರವಾಗಿ ಪ್ರದರ್ಶಿಸಿದೆ ಎಂದು ಹೇಳಿಕೆ ಕೊಟ್ಟ ಶರಣ್ ಪಂಪ್‌ವೆಲ್ ವಿರುದ್ಧ ದಾಖಲಿಸಿದ ಪ್ರಕರಣವನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಈ ಬಾರಿ ಶೇ80 ಕ್ಕೂ ಅಧಿಕ ಮತದಾನವಾಗ ಬೇಕೆಂಬುವುದು ಬಿಜೆಪಿಯ ಗುರಿ. ಬಿಜೆಪಿಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ವೈದ್ಯರು, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಧನಂಜಯ ಸರ್ಜಿ, ಅವರನ್ನು ಪದವೀಧರ, ಎನ್‌ಡಿಎ ಮೈತ್ರಿ ಅಭ್ಯರ್ಥಿ ಭೋಜೇಗೌಡ ಅವರು ಶಿಕ್ಷಕರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಂಡಾಯ ಅಭ್ಯರ್ಥಿಗಳು ಸಾಮಾನ್ಯ ಆದರೆ ಇದರಿಂದ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.
ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಾಮಾನ್ಯ ಕಾರ್ಯಕರ್ತನಾಗಿರುವ ನನ್ನನ್ನು ಪಕ್ಷ ಸಂಸದನಾಗಿ, ರಾಜ್ಯಾಧ್ಯಕ್ಷನಾಗಿ ಮಾಡಿದೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಮುಂದೆಯೂ ಸಾಯುವ ತನಕ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿರುವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ., ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್, ಮೇಯರ್ ಸುಧೀರ್ ಕಣ್ಣೂರು, ಚುನವಣಾ ಪ್ರಭಾರಿ ವಿಕಾಸ್ ಪುತ್ತೂರು, ಪ್ರಧಾನ ಕಾರ್ಯದರ್ಶಿ ಯತೀಶ್ ಮತ್ತಿತರರು ಉಪಸ್ಥಿತರಿದ್ದರು.