ಇದು ಅಂತ್ಯ ಅಲ್ಲ… ಆರಂಭ – ಆರ್‌. ಪದ್ಮರಾಜ್‌ ಪೂಜಾರಿ

ಮಂಗಳೂರು: ಜಿಲ್ಲೆಯಲ್ಲಿ ಪಕ್ಷ ಸಂಘಟಣೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಮುಂದಿನ ಅವಧಿಯಲ್ಲಿ ಬೂತ್‌ ಮಟ್ಟದಲ್ಲಿ ಸಂಘಟನಾ ಕಾರ್ಯ ನಡೆಸುವುದಾಗಿ ದ.ಕ ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಆರ್‌.ಪದ್ಮರಾಜ್‌ ಹೇಳಿದ್ದಾರೆ.

ಮಂಗಳೂರಿನ ಪಕ್ಷದ ಕಛೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಗೆದ್ದಿರುವ ಬ್ರಿಜೇಶ್ ಚೌಟ ಅವರಿಗೆ ಅಭಿನಂದನೆಗಳು ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ನಾಯಕರಿಗೆ ಧನ್ಯವಾದಗಳು ಎಂದು ಹೇಳಿದರು. ಕಾಂಗ್ರೆಸ್ ನಾಯಕರು ನನ್ನ ಮೇಲೆ ಇಟ್ಟು ಅಭ್ಯರ್ಥಿಯಾಗಿ ಆಯ್ಕೆ ‌ಮಾಡಿದ್ದಾರೆ. ಅವರು ಇಟ್ಟ ನಂಬಿಕೆ ಭರವಸೆಗಳನ್ನು ಉಳಿಸಿಕೊಳ್ಳುತ್ತೇನೆ. ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟ ಪಕ್ಷಕ್ಕೆ ‌ನಾಯಕರಿಗೆ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ‌. ಕಾಂಗ್ರೆಸ್ ಪಕ್ಷದಲ್ಲಿ ಸಂಘಟನೆಯ ಕೊರತೆ ಇದೆ, ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇನೆ. ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ನಂತರವೂ ಕಾಂಗ್ರೆಸ್ ‌ಗೆ ಹಿನ್ನಡೆಯಾಗಿದೆ. ಹೀಗಾಗಿ ರಾಜ್ಯದ ಜನರ ಮನಸ್ಸಿನಲ್ಲಿ ಏನಿದೆ ಅನ್ನೋದನ್ನು ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದ ಪದ್ಮರಾಜ್‌ ದ.ಕ ಹಿಂದುತ್ವ ಬಿಜೆಪಿಯ ಭದ್ರಕೋಟೆ ಎಂದು ಜನರನ್ನ ಯಾಮಾರಿಸುವ ಕೆಲಸ ನಿರಂತರ ನಡೆಯುತ್ತಿದೆ. ಅಯೋಧ್ಯೆ ರಾಮ ಮಂದಿರ ಪ್ರತಿಷ್ಠೆಯಾದಾಗಲೇ ಬಿಜೆಪಿ ಮನೆ ಮನೆಗೆ ತೆರಳಿ ಪ್ರಚಾರ ಶುರು ಮಾಡಿದ್ದರು. ಇಲ್ಲಿ ಅಯೋಧ್ಯೆ ಅಯೋಧ್ಯೆ ಅಂತಾರೆ, ಅಯೋಧ್ಯೆಯಲ್ಲಿ ಜನ ಬಿಜೆಪಿಯನ್ನ ಸೋಲಿಸಿದ್ದಾರೆ. ಇದರಲ್ಲೆ ನಮಗೆ ಅರ್ಥವಾಗಬೇಕು. ಜಿಲ್ಲೆಯ ಅಭಿವೃದ್ಧಿಯ ಕೆಲಸಗಳಲ್ಲಿ ನೂತನ ಸಂಸದರಿಗೆ ನಮ್ಮ ಸಹಕಾರ ಇದೆ. ನೂತನ ಸಂಸದರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲಿ ಎಂದರು. ಚುನಾವಣೆಯಲ್ಲಿ ಸಹಕಾರ ಕೊಟ್ಟವರನ್ನು ನಾನು ಜೀವನದಲ್ಲೇ ಮರೆಯುವುದಿಲ್ಲ. ಇಂಡಿಯಾ ಮೈತ್ರಿಕೂಟ ಉತ್ತಮ ಸಾಧನೆ ಮಾಡಿದೆ. ದೇಶದಲ್ಲಿ ಬದಲಾವಣೆಯ ಗಾಳಿ ಬೀಸಿದೆ ಎಂದರು.

ಅತೀ ಹೆಚ್ಚು ಮತ ಪಡೆದ ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾನು. ಕಳೆದ ಬಾರಿಗಿಂತ ಒಂದು ಲಕ್ಷಕ್ಕೂ ಅಧಿಕ ಮತಗಳು ಬಂದಿದೆ. ಇದು ಅಂತ್ಯವಲ್ಲ, ಆರಂಭ ಸೂಚನೆ ಮುಂಬರುವ ದಿನಗಳಲ್ಲಿ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟುವ ಕೆಲಸ ಮಾಡೋಣ ಎಂದು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ದ.ಕ. ಜಿಲ್ಲೆಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದರೂ, ನಾವು ನೈತಿಕವಾಗಿ ಗೆದ್ದಿದ್ದೇವೆ. ಆದರೆ ಬಿಜೆಪಿಯವರು ನೈತಿಕವಾಗಿ ಸೋತಿದ್ದಾರೆ. ಚಾರ್ ಸೊ ಪಾರ್ ಅನ್ನುತ್ತಿದ್ದವರು, ಈಗ ಅಧಿಕಾರ ಉಳಿಸಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಬೇರೆ ಬೇರೆ ರೀತಿಯಲ್ಲಿ ನಮ್ಮ ಒಕ್ಕೂಟವನ್ನು ಸೋಲಿಸುವ ಕೆಲಸ ಮಾಡಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಇಡಿ,ಐಟಿ ಬಳಸಿ ನಮ್ಮ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವ ಪ್ರಯತ್ನ ನಡೆಸಿದ್ದರು. ಆದರೆ ಜನತೆ ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳು ಮತಗಳಾಗಿ ನಮಗೆ ಪರಿವರ್ತನೆ ಆಗಿಲ್ಲ ಎನ್ನುವುದಕ್ಕಿಂತಲೂ ಬಡವರ ಬಾಳು ಬೆಳಗಲು ಸಹಕಾರಿಯಾಗಿರುವ ಬಗ್ಗೆ ಆತ್ಮತೃಪ್ತಿ ಇದೆ. ಒಂದಲ್ಲ ಒಂದು ದಿನ ಜನ ಇದನ್ನು ನೆನಪಿಸುತ್ತಾರೆ. ಹಾಗಾಗಿ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ರಮಾನಾಥ ರೈ ಉತ್ತರಿಸಿದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here