ಸ್ನಾತಕೋತ್ತರ ಪರೀಕ್ಷೆಗೆ ಹಾಜರಾದ 85ರ ವಯೋ ವೃದ್ಧ – ನಿವೃತ್ತಿಯ ನಂತರ 4 ಸ್ನಾತಕೋತ್ತರ ಪದವಿ ಪಡೆದ ನಿಂಗಯ್ಯ

ಮಂಗಳೂರು/ವಿಜಯಪುರ:  ಮನಸ್ಸಿದ್ದರೆ ಮಾರ್ಗವಿದೆ ಎಂಬ ಮಾತು ಇಲ್ಲಿ ನಿಜವಾಗಿದೆ. ಸಾಧನೆ ಮಾಡಬೇಕೆನ್ನುವವರಿಗೆ ಜಾತಿ, ಮತ, ಪಂಥ, ವಯಸ್ಸಿನ ಅಂತರ ಅಡ್ಡಿಯಾಗಲಾರದು ಎಂಬುವುದಕ್ಕೆ ಬಾಗಲಕೋಟೆಯ ನಿಂಗಯ್ಯ ಸಾಕ್ಷಿಯಾಗಿದ್ದಾರೆ. ಮಕ್ಕಳು ಮೊಮ್ಮಕ್ಕಳೊಂದಿಗೆ ಕಾಲ ಕಳೆಯಬೇಕಾದ ವಯಸ್ಸಿನಲ್ಲಿ, ಬಾಗಲಕೋಟೆ ಗುಡೂರಿನ 85ರ ವಯೋ ವೃದ್ಧ ನಿಂಗಯ್ಯ ಒಡೆಯರ ನಾಲ್ಕು ಸ್ನಾತಕೋತ್ತರ ಪದವಿಗಳಿಸಿದ್ದಾರೆ. ಸರ್ಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ಈ ಸಾಧನೆ ಮಾಡಿದ್ದಾರೆ. ಮತ್ತಷ್ಟು ಮಗದಷ್ಟು ಕಲಿಯಬೇಕೆಂಬ ಇವರ ಹಂಬಲದ ಫಲವಾಗಿ ಇಂದು ಮತ್ತೆ ಪರೀಕ್ಷೆಗೆ ಹಾಜರಾಗಿದ್ದಾರೆ. 

ಬಿಎಲ್​​​ಡಿಇ ಸಂಸ್ಥೆಯ ಜೆಎಸ್ಎಸ್ ಮಹಾವಿದ್ಯಾಲಯದಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಕೇಂದ್ರ ಆಯೋಜಿಸಿರುವ ಎಂಎ ಇಂಗ್ಲಿಷ್ ಪರೀಕ್ಷೆಗೆ 85 ವರ್ಷದ ನಿಂಗಯ್ಯ ಒಡೆಯರ ಹಾಜರಾಗಿದ್ದಾರೆ. ಈಗಾಗಲೇ ಬಾಹ್ಯ ವಿದ್ಯಾರ್ಥಿಯಾಗಿ ಕನ್ನಡ, ಹಿಂದಿ ಮತ್ತು ಸಮಾಜ ಶಾಸ್ತ್ರ ವಿಷಯಗಳಲ್ಲಿ ಎಂಎ ಪದವಿ ಪಡೆದಿದ್ದಾರೆ. ಇದೀಗ ನಿಂಗಯ್ಯ ಒಡೆಯರ ಇಂಗ್ಲೀಷ್ ವಿಷಯದಲ್ಲಿ ಎಂಎ ಪದವಿಗಾಗಿ ಪರೀಕ್ಷೆಗೆ ಹಾಜರಾಗಿದ್ದಾರೆ. ಇವರ ಜೊತೆಗೆ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ 68 ವರ್ಷದ ಪಿಎಂ ಮಡಿವಾಳ ಹಾಗೂ ನಾಲ್ಕೈದು ವರ್ಷದಲ್ಲಿ ಸೇವಾ ನಿವೃತ್ತಿಯಾಗಲಿರುವ ಶಿವಮೊಗ್ಗದ 55 ವರ್ಷದ ಕಲಾ ಶಿಕ್ಷಕ ನಾಗನಗೌಡ ಪಾಟೀಲ ಅವರೂ ಸಾಥ್ ನೀಡಿದ್ದಾರೆ.

ಆರೋಗ್ಯ ಇಲಾಖೆಯಲ್ಲಿ ಸೇವೆ ಮಾಡುತ್ತಿದ್ದ ನಾನು 2000ನೇ ಇಸವಿಯಲ್ಲಿ ನಿವೃತ್ತಿಯಾಗಿದ್ದೇನೆ. ಬಡತನದಿಂದ ಬಂದಿದ್ದು, ಸಾಹಿತ್ಯದಲ್ಲೂ ಆಸಕ್ತಿಯಿದೆ. ಈವರೆಗೆ ಕನ್ನಡದಲ್ಲಿ 15 ಕೃತಿಗಳ ರಚನೆ ಮಾಡಿದ್ದೇನೆ. ಹಿಂದಿ, ಇಂಗ್ಲಿಷ್, ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಭ್ಯಾಸ ಮಾಡುತ್ತ ಸಾಹಿತ್ಯವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದೇನೆ. ನನಗೆ ವಯಸ್ಸಾದರೂ ಆಸಕ್ತಿ ಕಡಿಮೆಯಾಗಿಲ್ಲ. ಯಾವಾಗ ನಾವು ಕಲಿಯುವುದನ್ನು ಬಿಡುತ್ತೇವೋ ಆವಾಗ ಅದು ಕಬ್ಬಿಣ ತುಕ್ಕು ಹಿಡಿದಂತಾಗುತ್ತದೆ. ಹೀಗಾಗಿ ಆಗಾಗ, ಚರ್ಚೆ, ಅಧ್ಯಯನ, ಪರೀಕ್ಷೆ, ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡರೆ ಜ್ಞಾಪಕ ಶಕ್ತಿ ಬೆಳೆಯುತ್ತದೆ. 1956 ರಲ್ಲಿ ನಾನು ಮೊದಲು ಶಾಲೆಗೆ ಸೇರಿ ಒಂದನೇ ತರಗತಿಯಲ್ಲಿ ಪರೀಕ್ಷೆ ಬರೆದೆ. ಅದೇ ಉತ್ಸಾಹ ಈಗಲೂ ಇದೆ ಎಂದು 85 ರ ಹರೆಯದ ನಿಂಗಯ್ಯ ಒಡೆಯರ ಸಂತಸ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here