ಮಂಗಳೂರು: ಪಾಕಿಸ್ತಾನದ ಜೊತೆ ನಾವು ಕ್ರಿಕೆಟ್ ಆಟ ಆಡಲೇಬಾರದು ಎಂದು ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ.
ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯು.ಟಿ ಖಾದರ್ ನಾನು ಕೂಡಾ ಕ್ರಿಕೆಟ್ ಆಟಗಾರ ಮತ್ತು ಕ್ರಿಕೆಟ್ ಅಭಿಮಾನಿ. ಅದಕ್ಕಿಂತ ಮಿಗಿಲಾಗಿ ನಾನು ಭಾರತ ದೇಶದ ಪ್ರಜೆ ಎಂದಿದ್ದಾರೆ. ಜೂ.9ರಂದು ಭಾರತ ಪಾಕಿಸ್ತಾನ ನಡುವೆ ಟಿ20 ವಿಶ್ವಕಪ್ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ನಾವು ಪಾಕಿಸ್ತಾನದ ಜೊತೆ ಕ್ರಿಕೆಟ್ ಆಟ ಆಡಲೇಬಾರದು. ಪಾಕಿಸ್ತಾನದವರು ಇಲ್ಲಿ ಬಂದಾಗ ವಿರೋಧಿಸಿದ್ದನ್ನು ನಾವು ನೋಡಿದ್ದೇವೆ. ಭಾರತ ದೇಶದಲ್ಲಿ ಅವರ ಜತೆ ಪಂದ್ಯ ನಿಷೇಧ ಮಾಡಲಾಗಿದೆ. ಹಾಗಿರುವಾಗ ಹೊರದೇಶದಲ್ಲಿ ಅವರ ಜೊತೆ ಯಾಕೆ ಕ್ರಿಕೆಟ್ ಆಟ ಆಡಿಸಬೇಕು ಎಂದು ಪ್ರಶ್ನಿಸಿದ್ದಾರೆ. ಅವರು ಸರಿಯಾಗುವ ತನಕ ಅವರ ಜತೆ ಕ್ರಿಕೆಟ್ ಪಂದ್ಯ ಆಡುವುದೇ ಬೇಡ. ಇದು ನನ್ನ ವೈಯಕ್ತಿಕ ಅನಿಸಿಕೆ ಎಂದ ಖಾದರ್ ಹೇಳಿದ್ದಾರೆ. ನಾಳೆ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು ಹೀನಾಯವಾಗಿ ಸೋಲಿಸಬೇಕು ಎಂದು ಹೇಳಿದರು.