ಮಚ್ಚಿನಿಂದ ತುಂಡು ತುಂಡಾಗಿ ಕತ್ತರಿಸಿ ಸ್ನೇಹಿತನ ಕೊಲೆ – ಬೆಂಗಳೂರಿನಲ್ಲೊಂದು ಭಯಾನಕ ಹತ್ಯೆ

ಮಂಗಳೂರು (ಬೆಂಗಳೂರು): ಸಿಲಿಕಾನ್​ ಸಿಟಿಯಲ್ಲಿ ಭಯಾನಕ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೆ.ವಿ.ಶ್ರೀನಾಥ್ (34) ಎಂಬ ವ್ಯಕ್ತಿಯನ್ನು ಮನೆಯಲ್ಲೇ ತುಂಡು ತುಂಡಾಗಿ ಕತ್ತರಿಸಿ ಮೋರಿಗೆ ಎಸೆಯಲಾಗಿದೆ. ಮೂರು ದಿನದಿಂದ ಹುಡುಕಿದರೂ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಾಧವ ರಾವ್ ಎಂಬಾತ ಈ ಕೃತ್ಯ ಎಸಗಿದ್ದು,  ಸಂಪಿಗೇಹಳ್ಳಿ ಪೊಲೀಸರಿಂದ ಭಯಾನಕ ಹತ್ಯೆ ಬೆಳಕಿಗೆ ಬಂದಿದೆ.

ಬಸವೇಶ್ವರ ನಗರದ ಮಾರ್ಗದರ್ಶಿ ಚಿಟ್ ಫಂಡ್​ನಲ್ಲಿ ಡೆವಲಪ್ಮೆಂಟ್ ಆಫೀಸರ್ ಆಗಿದ್ದ ಕೆ.ವಿ.ಶ್ರೀನಾಥ್,  ಥಣಿಸಂದ್ರದ ಅಂಜನಾದ್ರಿ ಲೇಔಟ್​ನಲ್ಲಿ ವಾಸವಾಗಿದ್ದ. ಮೇ.28ರ ಬೆಳಗ್ಗೆ ಮನೆಯಿಂದ ಕೆಲಸಕ್ಕೆಂದು ಹೊರ ಹೋಗಿದ್ದ ಆತ ರಾತ್ರಿಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಈ ಹಿನ್ನಲೆಯಲ್ಲಿ ಶ್ರೀನಾಥ್ ಪತ್ನಿ ಮೇ.29ರಂದು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಕೆ.ವಿ.ಶ್ರೀನಾಥ್ ಮೇ.28ರಂದು ಕೆ.ಆರ್.ಪುರಂನ ವಿಜಿನಪುರದಲ್ಲಿರೋ ಮಾಧವರಾವ್ ಮನೆಗೆ ಹೋಗಿರೋದು ತಿಳಿದು ಬಂದಿದ್ದು, ಸಿಸಿಟಿವಿಯಲ್ಲಿ ಮಾಧವರಾವ್ ಮನೆಗೆ ಶ್ರೀನಾಥ್ ಎಂಟ್ರಿ ಆಗಿರುವುದು ಸೆರೆಯಾಗಿದೆ.

ಆದರೆ ಕೆ.ವಿ.ಶ್ರೀನಾಥ್ ಮನೆಯಿಂದ ಹೊರಗೆ ಹೋಗುವುದು ರೆಕಾರ್ಡ್ ಆಗಿರಲಿಲ್ಲ. ಜೊತೆಗೆ ಮನೆಯ ಒಳಗಡೆ ಪರಿಶೀಲನೆ ಮಾಡಿದಾಗ ರಕ್ತದ ಕಲೆಗಳು ಪತ್ತೆಯಾಗಿದೆ. ಮಾಧವರಾವ್ ಬಗ್ಗೆ ವಿಚಾರಿಸಿದಾಗ ಆತನೂ ನಾಪತ್ತೆಯಾಗಿದ್ದ. ಬಳಿಕ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಮಾಧವರಾವ್​ನನ್ನು ಪತ್ತೆ ಹಚ್ಚಿ ಬಂಧಿಸಿ  ಕರೆ ತರಲಾಗಿದೆ. ಪೊಲೀಸರ ವಿಚಾರಣೆ ವೇಳೆ ಮಾಧವರಾವ್ ಅಸಲಿ ವಿಚಾರ  ಬಾಯ್ಬಿಟ್ಟಿದ್ದಾನೆ. ‌ಎರಡು ವರ್ಷದಿಂದ ಮಾಧವರಾವ್ ಮತ್ತು ಕೆ.ವಿ.ಶ್ರೀನಾಥ್​ ಪರಿಚಿತರಾಗಿದ್ದರು. ಶ್ರೀನಾಥ್ ಬಳಿ ಮಾಧವರಾವ್ 5 ಲಕ್ಷ ರೂಪಾಯಿ ಹಣದ ಚೀಟಿ ಹಾಕಿದ್ದ. ಈ ಚೀಟಿ ಹಣದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗುತ್ತಿತ್ತು. ಚೀಟಿ ಹಣ ವಾಪಸ್ ಕೊಡುವಂತೆ ಮಾಧವರಾವ್​ಗೆ ಶ್ರೀನಾಥ್​ ಒತ್ತಾಯ ಮಾಡುತ್ತಿದ್ದ. ಅಲ್ಲದೇ ಮಾಧವ್ ರಾವ್ ಪತ್ನಿ ಜೊತೆ ಕೆ.ವಿ.ಶ್ರೀನಾಥ್​ಗೆ ಅಕ್ರಮ ಸಂಬಂಧ ಇತ್ತು ಎಂದು ಹೇಳಲಾಗಿದೆ.

ಹೀಗಿರುವಾಗ ಮೇ.28ರಂದು ಬೆಳಗ್ಗೆ ಮಾಧವರಾವ್ ಮನೆಗೆ ಕೆ.ವಿ.ಶ್ರೀನಾಥ್ ಬಂದಿದ್ದಾನೆ. ಇದೇ ವೇಳೆ ಇಬ್ಬರಿಗೂ ಹಣದ ವಿಚಾರದಲ್ಲಿ ಗಲಾಟೆ ಆಗಿದೆ. ಬಳಿಕ ಮಾಧವರಾವ್ ಮನೆಯಲ್ಲಿದ್ದ ಜಾಕ್ ರಾಡ್​ನಿಂದ ಶ್ರೀನಾಥ್ ತಲೆಗೆ ಹೊಡೆದಿದ್ದು, ಶ್ರೀನಾಥ್​​ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಬಳಿಕ ಮಾಧವರಾವ್ ದೇಹವನ್ನು ಮಚ್ಚಿನಿಂದ ತುಂಡು ತುಂಡಾಗಿ ಕತ್ತರಿಸಿ, ಸಾಕ್ಷಿ ನಾಶ ಮಾಡಲು ಮೃತದೇಹವನ್ನು ಮೂರು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದಾನೆ. ಬಳಿಕ 3 ಒಂದು ಬ್ಯಾಗ್​ ಗಳಲ್ಲಿ ಮೃತದೇಹದ ತುಂಡುಗಳನ್ನು ಬೆಳತ್ತೂರು ಬಳಿಯ ಮೋರಿಯಲ್ಲಿ  ಬಿಸಾಕಿದ್ದಾನೆ. ನಂತರ ತನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಮಾದವರಾವ್ ಆಂಧ್ರ ಪ್ರದೇಶಕ್ಕೆ ಎಸ್ಕೇಪ್ ಆಗಿದ್ದಾನೆ. ಸದ್ಯ ಈ ಪ್ರಕರಣ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಕಳೆದ ಮೂರು ದಿನದಿಂದ ಪೊಲೀಸರು ಶ್ರೀನಾಥ್​ ಮೃತದೇಹದ ತುಂಡಗಳಿಗಾಗಿ ಹುಡುಕಾಡ ನಡೆಸುತ್ತಿದ್ದಾರೆ. ಮೃತದೇಹ ಹುಡುಕಲು ಮಂಗಳೂರಿನಿಂದ ತಜ್ಞರನ್ನು ಕರೆಸಲಾಗಿದೆ ಆದರೆ ಮೃತದೇಹದ ತುಂಡುಗಳು ಪತ್ತೆಯಾಗಿಲ್ಲ. ಮೋರಿಯಲ್ಲಿ ಮೃತದೇಹದ ತುಂಡುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರಬಹುದೆಂದು ಶಂಕಿಸಲಾಗಿದೆ.

LEAVE A REPLY

Please enter your comment!
Please enter your name here