ಮಂಗಳೂರು/ವಿಟ್ಲ: ಮಾಣಿ ಗ್ರಾಮದಲ್ಲಿ ಹಾಡಹಗಲೇ ಮನೆಯೊಂದರಲ್ಲಿ ಚಿನ್ನಾಭರಣ ಸಹಿತ ನಗದು ಹಣ ಕಳ್ಳತನವಾದ ಘಟನೆ ನಡೆದಿದೆ.
ಮಾಣಿ ಪಲಿಕೆ ನಿವಾಸಿ ಸುಜಯ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಶನಿವಾರ(ಜೂ.15) ಬೆಳಿಗ್ಗೆ ಸುಜಯ್ ಮನೆಗೆ ಬೀಗ ಹಾಕಿ ಪೇಟೆಗೆ ಹೋಗಿದ್ದು, ಮಧ್ಯಾಹ್ನ ಮನೆಗೆ ಮರಳುವಷ್ಟರಲ್ಲಿ ಕಳ್ಳತನ ನಡೆದಿರುವುದು ಕಂಡುಬಂದಿದೆ. ಬಾಗಿಲಿನ ಬೀಗ ಒಡೆದು ಒಳನುಗ್ಗಿದ ಕಳ್ಳರು ಎರಡು ಕಪಾಟುಗಳನ್ನು ಮುರಿದು ಹಾಕಿ ಅದರೊಳಗಿದ್ದ 80 ಸಾವಿರ ಮೌಲ್ಯದ ಚಿನ್ನದ ಚೈನು, 28ಸಾವಿರ ಮೌಲ್ಯದ ಕಿವಿಯ ಆಭರಣ, ಪಾಸ್ ಪೋರ್ಟ್ ಮತ್ತು 15 ಸಾವಿರ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಈ ಪ್ರಕರಣದ ಬಗ್ಗೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.