ಮಂಗಳೂರು/ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಗ್ಯಾಂಗ್ ಬಂಧನವಾದ ಬೆನ್ನಲ್ಲೇ ಸ್ಯಾಂಡಲ್ವುಡ್ ಖ್ಯಾತ ಹಾಸ್ಯನಟ ಚಿಕ್ಕಣ್ಣನಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಕೊಲೆ ನಡೆದ ಜೂ. 8 (ಶನಿವಾರ)ರಂದು ದರ್ಶನ್ ಮತ್ತು ಗ್ಯಾಂಗ್ ಸದಸ್ಯರು ಆರ್ಆರ್ ನಗರದ ಸ್ಟೋನಿಬ್ರೂಕ್ ಪಬ್ನಲ್ಲಿ ಮಧ್ಯಾಹ್ನದಿಂದ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಚಿಕ್ಕಣ್ಣ ಕೂಡಾ ಭಾಗಿಯಾಗಿದ್ದರು. ಆದರೆ ದರ್ಶನ್ ಸಂಜೆ ವೇಳೆಗೆ ಸ್ವಲ್ಪ ಕೆಲಸವಿದೆ ಎಂದು ಹೇಳಿ ಹೊರಟಿದ್ದರು. ರೇಣುಕಾಸ್ವಾಮಿ ಕೊಲೆಯಾದ ದಿನವೇ ದರ್ಶನ್ ಜೊತೆ ಪಾರ್ಟಿ ಮಾಡಿದ್ದರಿಂದ ಪೊಲೀಸರು ಚಿಕ್ಕಣ್ಣನನ್ನು ತುರ್ತು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ವಿಚಾರವಾಗಿ ಪಬ್ನಲ್ಲಿ ಏನಾದರೂ ಚರ್ಚೆ ನಡೆದಿತ್ತಾ ಎಂಬುದರ ಬಗ್ಗೆ ಮಾಹಿತಿ ಪಡೆಯುವ ಸಾಧ್ಯತೆಯಿದೆ. ಕೊಲೆಯ ಬಗ್ಗೆ ಮಾಹಿತಿ ಇಲ್ಲದೇ ಇದ್ದರೂ ಕೂಡ, ಪಾರ್ಟಿಯಲ್ಲಿದ್ದರು ಎಂಬ ಕಾರಣಕ್ಕೆ ಸಾಕ್ಷಿಯಾಗಿ ಪರಿಗಣನೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗದ ಕಾರಣ ಚಿಕ್ಕಣ್ಣ ಅವರನ್ನು ಬಂಧನ ಮಾಡುವುದಿಲ್ಲ. ಬದಲಾಗಿ ಕೊಲೆಯ ಸುಳಿವಾಗಿ ಪರಿಗಣಿಸಲಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.