ಮಂಗಳೂರು/ಆನೇಕಲ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿರುವ ದರ್ಶನ್ ವಿಚಾರಣೆ ವೇಳೆ ಅವರ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ ಅವರು ನಿಗೂಢವಾಗಿ ಕಣ್ಮರೆಯಾಗಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. 2018ರಿಂದಲೂ ನಾಪತ್ತೆಯಾಗಿರುವ ಮಲ್ಲಿಕಾರ್ಜುನ ಅವರಿಗೆ ದರ್ಶನ್ ಮತ್ತು ಅವರ ಗ್ಯಾಂಗ್ಗೂ ಸಂಬಂಧವಿದೆಯೇ ಎನ್ನುವ ನಿಟ್ಟಿನಲ್ಲಿ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಈ ಮಿಸ್ಸಿಂಗ್ ಕೇಸ್ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವ ನಡುವೆ ದರ್ಶನ್‌ಗೆ ಸೇರಿದ ಫಾರ್ಮ್ ಹೌಸ್ ನಲ್ಲಿ ಈ ಹಿಂದೆ ರೈಟರ್ ಆಗಿದ್ದ ವ್ಯಕ್ತಿಯ ಆತ್ಮಹತ್ಯೆ ಪ್ರಕರಣ ಮುನ್ನಲೆಗೆ ಬಂದಿದ್ದು ಪೊಲೀಸರು ಈ ನಿಟ್ಟಿನಲ್ಲಿಯೂ ತನಿಖೆಗೆ ಮುಂದಾಗಿದ್ದಾರೆ.
ಆನೇಕಲ್ ತಾಲ್ಲೂಕಿನ ಬಗ್ಗನದೊಡ್ಡಿಯ ದುರ್ಗ ಫಾರ್ಮ್ ಹೌಸ್‌ನಲ್ಲಿ ಶ್ರೀಧರ್ ರೈಟರ್ ಆಗಿ ಕೆಲಸ ಮಾಡಿಕೊಂಡಿದ್ದು ಡೆತ್ ನೋಟ್ ಬರೆದಿಟ್ಟು ಕಳೆದ ಏಪ್ರಿಲ್ 17ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಶ್ರೀಧರ್ ಮೃತ ದೇಹವನ್ನು ನೋಡಿದ್ದ ಆತನ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದನು. ಪೊಲೀಸರು ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿದಾಗ ಒಂದು ವರ್ಷಗಳ ಕಾಲ ರೈಟರ್ ಆಗಿ ಕೆಲಸ ಮಾಡಿದ್ದ ಶ್ರೀಧರ್, ಫಾರ್ಮ್‌ಹೌಸ್ ಪಕ್ಕದ ಕಲ್ಲು ಬಂಡೆ ಮೇಲೆ ಅನಾಥವಾಗಿ ಶವವಾಗಿ ಪತ್ತೆಯಾಗಿದ್ದಾರೆ. ಸುಮಾರು 10 ಎಕರೆ ಪ್ರದೇಶದ ಫಾರ್ಮ್ ಹೌಸ್ ನೋಡಿಕೊಳ್ಳುತ್ತಿದ್ದ ರೈಟರ್ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆನೇಕಲ್ ಪೊಲೀಸ್ ಠಾಣೆಯಲ್ಲಿ ಅನ್ ನ್ಯಾಚುರಲ್ ಡೆತ್ ರಿಪೋರ್ಟ್ ದಾಖಲು ಮಾಡಿಕೊಂಡಿದ್ದರು. ಆದರೆ ಮಾಧ್ಯಮಗಳಲ್ಲಿ ಈ ವಿಚಾರ ಸುದ್ದಿಯಾಗಿರಲಿಲ್ಲ.
ರೈಟರ್ ಶ್ರೀಧರ್ ಆತ್ಮಹತ್ಯೆ ಪ್ರಕರಣ ಹೊರ ಜಗತ್ತಿಗೆ ತಿಳಿಯುತ್ತಲೇ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು ದರ್ಶನ್‌ನಿಂದ ಇನ್ನಷ್ಟು ಕೊಲೆಯಾಗಿರಬಹುದು, ಸಮಗ್ರ ತನಿಖೆ ಮಾಡಿ ಎಂಬ ಕೂಗು ಕೇಳಿ ಬಂದಿದೆ. ನಟ ದರ್ಶನ್ ಒಬ್ಬ ಅತ್ಯಂತ ದುರಹರಂಕಾರದ ವ್ಯಕ್ತಿಯಾಗಿದ್ದಾನೆ. ಆತ ಇದೊಂದೇ ಕೊಲೆಯಲ್ಲ, ಇನ್ನಷ್ಟು ಕೊಲೆ ಮಾಡಿರುವ ಅನುಮಾನವಿದೆ. ದರ್ಶನ್ ಮ್ಯಾನೇಜರ್ ಕಣ್ಮರೆಯಾಗಿದ್ದಾರೆ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ತನಿಖೆಯಾಗಲಿ ಎಂದು ಮಾಜಿ ಶಾಸಕ ಅಪ್ಪಚ್ಚು ರಂಜನ್ ಒತ್ತಾಯಿಸಿದ್ದಾರೆ. ಆದರೆ ಅವರು 10 ಕೋಟಿ ರೂ. ಮಿಸ್ ಯೂಸ್ ಮಾಡಿದ್ದಾರೆ. ಹೀಗಾಗಿ ಲೆಟರ್ ಬರೆದಿಟ್ಟು ನಾಪತ್ತೆಯಾಗಿದ್ದಾರೆ ಎಂದು ದರ್ಶನ್ ವಿಚಾರಣೆ ವೇಳೆ ಹೇಳಿದ್ದಾರೆ. ಆದರೆ, ಇವರೇ ಈ ರೀತಿ ಲೆಟರ್ ಬರೆದಿಟ್ಟು ಮ್ಯಾನೇಜರ್ ನನ್ನು ಮರ್ಡರ್ ಮಾಡಿರುವ ಸಂಶಯವಿದೆ. ಹೀಗಾಗಿ ದರ್ಶನ್ ವಿರುದ್ಧ ಸೂಕ್ತ ತನಿಖೆಯಾಗಬೇಕೆಂದು ಅಪ್ಪಚ್ಚು ರಂಜನ್ ಮಡಿಕೇರಿಯಲ್ಲಿ ಒತ್ತಾಯಿಸಿದ್ದಾರೆ.