ಮಂಗಳೂರು (ಬೆಂಗಳೂರು): ಕಲಿಯುಗ- ಸತ್ಯಯುಗದ ಸಂಧಿಕಾಲ ಆರಂಭವಾಗಿದ್ದು, ರಾಜಕಾರಣಿಗಳು ಅವರು ಮಾಡಿದ ಕರ್ಮಕ್ಕೆ ತಕ್ಕ ಫಲ ಅನುಭವಿಸುತ್ತಿದ್ದಾರೆ ಎಂದು ಒಡಿಶಾದ ಖ್ಯಾತ ಕಾಲಜ್ಞಾನಿ ಪಂ.ಕಾಶಿನಾಥ್ ಮಿಶ್ರ ತಿಳಿಸಿದ್ದಾರೆ.
ಬೆಂಗಳೂರಿನ ಬಸವನಗುಡಿಯ ಶಂಕರಮಠದ ಶ್ರೀ ಭಾರತೀ ತೀರ್ಥ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಂ.ಕಾಶಿನಾಥ್ ಮಿಶ್ರ, ಎಲ್ಲಾ ರಾಜಕಾರಣಿಗಳು ತಮ್ಮ ಕರ್ಮಕ್ಕೆ ಫಲ ಪಡೆಯುವ ದಿನ ಬಂದಿದೆ. ಮಾರ್ಚ್ 29 2025ರಿಂದ 2034ರ ವರೆಗೆ ವಿಶ್ವ ಸಂಕಷ್ಟದ ದಿನ ಎದುರಿಸಲಿದೆ. ಭಾರತದ ಮೇಲೆ 13 ರಾಷ್ಟ್ರಗಳು ಧಾಳಿ ಮಾಡಲಿವೆ. ಇದರಲ್ಲಿ ಕೆಲವು ಮಿತ್ರ ದೇಶಗಳು ಕೂಡಾ ಸೇರಿವೆ. ಈ ಯುದ್ಧದಲ್ಲಿ ಉತ್ತರ ಭಾರತ ಅಪಾರ ಕಷ್ಟ ಎದುರಿಸಲಿದೆ ಎಂದು ಹೇಳಿದ್ದಾರೆ. ಪುರಿ ಜಗನ್ನಾಥ ದೇಗುಲ ಸಮುದ್ರದಲ್ಲಿ ಮುಳುಗುವ ಸಾಧ್ಯತೆಯಿದೆ ಎಂದು ತಿಳಿಸಿರುವ ಅವರು, ಈ ಅವಧಿಯಲ್ಲಿ ಹೊಸ ಸಾಂಕ್ರಾಮಿಕ ಮಹಾಮಾರಿ ವಿಶ್ವದಲ್ಲಿ ಹರಡಲಿದ್ದು, ಯುದ್ಧ ನಡೆಯಲಿದೆ. 2024ರ ಬಳಿಕ ಸತ್ಯಯುಗ ಆರಂಭವಾಗಲಿದ್ದು ಬಳಿಕ ಎಲ್ಲವೂ ಬದಲಾಗಲಿದೆ ಎಂದು ಹೇಳಿದ್ದಾರೆ.
ಕಾಲಜ್ಞಾನಿ ಪಂ.ಕಾಶಿನಾಥ್ ಮಿಶ್ರ ಶ್ರೀ ಮದ್ಭಾಗವತ ಮಹಾ ಪುರಾಣ ಕಥಾಮೃತ ಮತ್ತು ಭವಿಷ್ಯ ಮಾಲಿಕಾ ಪುರಾಣ ಕಾಯಕ್ರಮ ನಡೆಸಿಕೊಡಲು ಬೆಂಗಳೂರಿಗೆ ಆಗಮಿಸಿದ್ದು, ಜೂ.24ರಿಂದ ಜೂ.30ರವರೆಗೆ ನಗರದ ಬಸವನಗುಡಿಯ ಶಂಕರ ಮಠದ ಶ್ರೀ ಭಾರತೀ ತೀರ್ಥ ಸಭಾಭವನದಲ್ಲಿ ಕಾಲಜ್ಞಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಕಾಲಜ್ಞಾನ ಗ್ರಂಥ
600 ವರ್ಷ ಹಳೆಯದಾದ ಈ ಗ್ರಂಥದ ಪ್ರಕಾರ ವಿಶ್ವದ ಈಗಿರುವ 795 ಕೋಟಿ ಜನರ ಪೈಕಿ ಕೇವಲ 64 ಕೋಟಿ ಜನರು ಮಾತ್ರ ಕಲಿಯುಗದಿಂದ ಸತ್ಯಯುಗಕ್ಕೆ ತೆರಳುತ್ತಾರೆ. ಮುಂದಿನ 8 ವರ್ಷಗಳಲ್ಲಿ ಜಗತ್ತು ಮೂರನೇ ಜಾಗತಿಕ ಮಹಾಯುದ್ಧ, ಆಹಾರ ಧಾನ್ಯಗಳ ಕೊರತೆ, ಬಿರುಗಾಳಿ, ಸುಂಟರ ಗಾಳಿ, ಪ್ರವಾಹ, ಸುನಾಮಿ, ಜ್ವಾಲಾಮುಖಿ ಸ್ಫೋಟ ಸಂಭವಿಸಲಿದೆ. ಬೆಂಕಿಯಿಂದ ನಾಶ, ಭೂಕಂಪಗಳು, ಬರ ಮತ್ತು ಹಸಿವು, ಸಾಂಕ್ರಾಮಿಕ ರೋಗಗಳಿಂದ ಈ ಜಗತ್ತು ನಡುಗಲಿದೆ ಎಂದು ಪಂ.ಕಾಶಿನಾಥ್ ಮಿಶ್ರ ಭವಿಷ್ಯ ನುಡಿದಿದ್ದಾರೆ.