ಮಂಗಳೂರು(ಅಯೋಧ್ಯೆ): ಕಳೆದ ಜನವರಿ 22ರಂದು ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ಮಾಡಿದ್ದು, 5 ತಿಂಗಳು ಕಳೆದು ಹೋಗಿದೆ. ದೇಶದ ಮೂಲೆ ಮೂಲೆಯಿಂದ ಭಕ್ತರು ಮಂದಿರಕ್ಕೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ. ಸದ್ಯ ಅಯೋಧ್ಯೆಯಲ್ಲಿ ಭಾರೀ ಮಳೆಯಾಗಿದ್ದು ಮಳೆಗೆ ರಾಮಮಂದಿರದ ಛಾವಣಿ ಸೋರುತ್ತಿದೆ ಎಂದು ದೇವಾಲಯದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಮಾಹಿತಿ ನೀಡಿದ್ದಾರೆ.
ಮೊದಲ ಮಳೆಗೆ ಗರ್ಭಗುಡಿಯ ಛಾವಣಿ ಮೂಲಕ ನೀರು ಒಳಗೆ ಬಂದಿದೆ. ನೂರಾರು ಎಂಜಿನಿಯರ್‌ಗಳು ಇಲ್ಲಿದ್ದಾರೆ. ಸುಸಜ್ಜಿತವಾಗಿಯೇ ರಾಮಮಂದಿರ ನಿರ್ಮಿಸಲಾಗಿದೆ. ಹೀಗಿದ್ದರೂ ಗರ್ಭಗುಡಿಯೇ ಸೋರುತ್ತಿರುವುದು ಟೀಕೆಗೆ ಕಾರಣವಾಗಿದೆ. ಕೂಡಲೇ ರಾಮಮಂದಿರದ ಕಡೆ ಗಮನ ಹರಿಸಿ, ಸಮಸ್ಯೆ ಸರಿಪಡಿಸಬೇಕಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಅಯೋಧ್ಯೆ ಮಂದಿರದ ಕಾಮಗಾರಿ ನಡೆಯುತ್ತಿರುವುದರಿಂದ ನೀರು ಸೋರಿಕೆ ಸಹಜ ಎಂದು ದೇಗುಲ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಸ್ಪಷ್ಟನೆ ನೀಡಿದ್ದಾರೆ.
ದೇವಾಲಯದ ಆವರಣದಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ರಾಮಲಲ್ಲಾ ಮುಂಭಾಗದಲ್ಲಿ ಅರ್ಚಕರು ಕುಳಿತುಕೊಳ್ಳುವ ಸ್ಥಳದಲ್ಲಿ ಮೇಲ್ಛಾವಣಿಯಿಂದ ನೀರು ಸೋರಿಕೆ ಆಗಿದೆ. ದೇಶದ ಪ್ರಮುಖ ಇಂಜಿನಿಯರ್ಸ್ ರಾಮಮಂದಿರ ಕಟ್ಟಿದ್ದಾರೆ. ಆದರೆ ಇದರಲ್ಲೇ ಮಳೆ ನೀರು ಸೋರಿಕೆಯಾಗುತ್ತಿರುವುದು ಅಶ್ಚರ್ಯ ಎಂದ ರಾಮಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.
ವಿಶ್ವಪ್ರಸಿದ್ದ ದೇವಾಲಯದಲ್ಲಿ ಮಳೆ ನೀರಿನ ಸೋರಿಕೆಯೇ ಅಶ್ಚರ್ಯ ತಂದಿದೆ. ಇದು ಹೇಗೆ ಆಯಿತು? ದೊಡ್ಡ ದೊಡ್ಡ ಇಂಜಿನಿಯರ್ಗಳು ನಿರ್ಮಿಸಿದ ಮೇಲೂ ಅವರ ಉಪಸ್ಥಿತಿಯಲ್ಲಿ ಮಳೆ ನೀರಿನ ಸೋರಿಕೆ , ಇದು ದೊಡ್ಡ ತಪ್ಪು. ದೇವಾಲಯದ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದ ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ಆರೋಪಿಸಿದ್ದಾರೆ.