ಚನ್ನಪಟ್ಟಣಕ್ಕೆ‌ ಅಳಿಲು ಸೇವೆ ಮಾಡಲು ಸೂಕ್ತ ಸಮಯ ಒದಗಿಬಂದಿದೆ – ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಸೇವೆ ನೆರವೇರಿಸಿದ ಡಿಸಿಎಂ

ಮಂಗಳೂರು: ಚನ್ನಪಟ್ಟಣದಲ್ಲಿ ಏನೂ ಅಭಿವೃದ್ಧಿ ಆಗಿಲ್ಲ ಎಂಬ ಭಾವನೆ ಅಲ್ಲಿನ ಜನರಲ್ಲಿದೆ. ಅಲ್ಲಿನವರಿಗೆ ಅಳಿಲು ಸೇವೆ ಮಾಡೋಣ ಎಂದು ಭಾವಿಸಿದ್ದೇವೆ. ಅದಕ್ಕೀಗ ಸೂಕ್ತ ಸಮಯ ಒದಗಿ ಬಂದಿದೆ’ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕುಟುಂಬ ಸದಸ್ಯರೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಲು ಮಂಗಳೂರಿಗೆ ಆಗಮಿಸಿದ ಡಿಸಿಎಂ ಡಿ‌ ಕೆ ಶಿವಕುಮಾರ್ ಬಜಪೆ‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ತಮ್ಮ ಡಿ.ಕೆ.ಸುರೇಶ್‌ಗೆ ಆಸಕ್ತಿಯಿಲ್ಲ. ಜನರು ನಮಗೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಹೇಳಿದ್ದಾರೆ. ಆದರೆ ಪಕ್ಷದ ಕೆಲಸ ಮಾಡಬೇಕೆಂಬ ಆಸೆಯಿದೆ. ಅಲ್ಲಿನ 85 ಸಾವಿರ ಮಂದಿ ನಮಗೆ ಮತಕೊಟ್ಟಿದ್ದಾರೆ. ನಮ್ಮನ್ನು ನಂಬಿದವರನ್ನು ಬಿಡುವುದಕ್ಕೆ ಆಗುವುದಿಲ್ಲ. ದೇವರು ನಮಗೆ ಅಧಿಕಾರ ಕೊಟ್ಟಿದ್ದಾರೆ. ಜನ 136 ಸೀಟ್ ಕೊಟ್ಟಿದ್ದಾರೆ. ಅದನ್ನು ಉಳಿಸಬೇಕಿದೆ’ ಎಂದರು. ಚನ್ನಪಟ್ಟಣಕ್ಕೆ ನಾನು ಏನೂ ಮಾಡಿಲ್ಲವೆಂದು ಎಚ್.ಡಿ.ಕುಮಾರಸ್ವಾಮಿಯವರಿಗೇನು ಗೊತ್ತು. ಅವರು ಚನ್ನಪಟ್ಟಣ ನೋಡುವುದಕ್ಕೂ ಮೊದಲೇ ನಾನು ನೋಡಿದ್ದೇನೆ. ಅವರು ಬಹಳ ತಡವಾಗಿ ರಾಜಕೀಯಕ್ಕೆ ಬಂದವರು. ನಾನು 1985ರಲ್ಲೆ ಚುನಾವಣೆ ಎದುರಿಸಿದವನು. ಅವರು 1995ರ ಬಳಿಕ ರಾಜಕೀಯ ಪ್ರವೇಶಿಸಿದವರು‌. ಅವರಿಗಿಂತ 10 ವರ್ಷಕ್ಕಿಂತ ಮೊದಲೇ ನನಗೆ ಚನ್ನಪಟ್ಟಣ ಗೊತ್ತು. ನಾನು ಅದೇ ಜಿಲ್ಲೆಯವನು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇನ್ನಷ್ಟು ಮಂದಿಯನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂಬ ಬೇಡಿಕೆ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನೀವು ದಿನವೂ ಈ ಬಗ್ಗೆ ಸುದ್ದಿ ಮಾಡುತ್ತಿದ್ದೀರಿ. ಇದರಿಂದ ಖುಷಿ ಆಗುವವರಿಗೆ ಆಗಲಿ. ಖುಷಿ ಪಡುವವರನ್ನು ನಾನೇಕೆ ಬೇಡ ಎನ್ನಲಿ. ಯಾರು ಏನು ಬೇಕಾದರೂ ಬೇಡಿಕೆ ಸಲ್ಲಿಸಲಿ. ಪಕ್ಷವು ಯಾರಿಗೆ ಎಲ್ಲಿ ಉತ್ತರ ಕೊಡಬೇಕೋ ಕೊಡುತ್ತದೆ’ ಎಂದರು. ತಮ್ಮ ಮೇಲಿನ ದ್ವೇಷದ ಕಾರಣಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಗೆ ರಾಜ್ಯ ಸರ್ಕಾರ ಅನುಮತಿ ನೀಡುತ್ತಿಲ್ಲ’ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಮೈನಿಂಗ್ ಬಗ್ಗೆ ಹೆಚ್‌ಡಿಕೆಗೆ ಏನು ಮಾಹಿತಿ ಇದೆಯೋ ಗೊತ್ತಿಲ್ಲ. ನನಗಂತೂ ಏನೂ ಗೊತ್ತಿಲ್ಲ ಎಂದು ಹೇಳಿದರು.

ಕುಕ್ಕೆ ಸುಬ್ರಹ್ನಣ್ಯ ಕ್ಷೇತ್ರಕ್ಕೆ ಆಗಮಿಸಿರುವ ಬಗ್ಗೆ ಮಾತನಾಡಿದ ಡಿಕೆಶಿ, ‘ನಾವು ಹಿಂದೂ ಧರ್ಮದವರು. ನಮ್ಮ ರಾಜ್ಯದಲ್ಲಿ ಎಲ್ಲಾ ಸಂಸ್ಕೃತಿಯನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಅವರವರ ನಂಬಿಕೆ ಪ್ರಕಾರ ಅವರು ಪ್ರಾರ್ಥಿಸುತ್ತಾರೆ. ಬಹಳ ದಿನದಿಂದ ಸುಬ್ರಹ್ಮಣ್ಯಕ್ಕೆ ಹೋಗಬೇಕೆಂಬ ಆಸೆಯಿತ್ತು. ಇಂದು ಕುಟುಂಬ ಸಹಿತ ಹೋಗುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಬಳಿಕ ಕುಟುಂಬ ಸಮೇತರಾಗಿ ರಸ್ತೆ ಮಾರ್ಗವಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿದ ಡಿಸಿಎಂ  ಆಶ್ಲೇಷ ಬಲಿ ಸೇವೆ ನೆರವೇರಿಸಿದರು. ಬಿಡುವಿನ ವೇಳೆ ಸುದ್ದಿ ಪತ್ರಿಕೆಯನ್ನು ಓದಿದ ಡಿಸಿಎಂ ಪತ್ರಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸುಬ್ರಹ್ಮಣ್ಯದಲ್ಲಿ  ಶಾಸಕಿ ಭಾಗಿರಥಿ ಮುರುಳ್ಯ ಬರಮಾಡಿಕೊಂಡರು. ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಜೊತೆಯಲ್ಲಿದ್ದರು.

 

LEAVE A REPLY

Please enter your comment!
Please enter your name here