ಬರಹ: ಹಮೀದ್ ಪುತ್ತೂರು
ಮಂಗಳೂರು/ಪುತ್ತೂರು: ಪುತ್ತೂರಿಗೆ ಸಂಬಂಧಪಟ್ಟಂತೆ ಬಿರುಮಲೆ ಬೆಟ್ಟ ಪ್ರಕೃತಿ ಸಹಜ ಆಕರ್ಷಕ(ಪ್ರವಾಸಿ) ತಾಣ. ಹಚ್ಚ ಹಸಿರಿನಿಂದ ಕಂಗೊಳಿಸುವ ಬೆಟ್ಟದ ತುದಿಯಲ್ಲಿ ನಿಂತರೆ ಪುತ್ತೂರಿನ ಅಷ್ಟದಿಕ್ಕನ್ನೂ ಇಲ್ಲಿಂದ ವೀಕ್ಷಿಸಬಹುದು. ಆದರೆ ಹಸಿರು ಹೊದ್ದು ಮಲಗಿದ್ದ ಬಿರುಮಲೆ ಈಗ ಮೊದಲಿನಂತಿಲ್ಲ. ತನ್ನ ನೈಸರ್ಗಿಕ ಚೆಲುವನ್ನು ಕಳೆದುಕೊಂಡು ಬಿರುಮಲೆ ಈಗ ಅರೆ ಬೆತ್ತಲೆಯಾಗಿದೆ. ಹಸಿರ ಸೆರಗು ಜಾರಿದ್ದು ನೈಸರ್ಗಿಕ ಸೊಬಗೂ ಮೊದಲಿನಂತಿಲ್ಲ. ಪರಿಸರ ಸೂಕ್ಷ್ಮ ಪ್ರದೇಶವಾದ ಬಿರುಮಲೆ ಇಲ್ಲಿ ಬೀಳುವ ಬಿರುಮಳೆಗೆ ಕುಸಿಯಲಿದೆಯೇ? ಎಂಬ ಚಿಂತೆ, ಭಯ ಎಲ್ಲರನ್ನೂ ಕಾಡತೊಡಗಿದೆ.
ಕಸ್ತೂರಿ ರಂಗನ್ ವರದಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ 17 ಗ್ರಾಮ, ಸುಳ್ಯ ತಾಲೂಕಿನ 18 ಗ್ರಾಮ, ಪುತ್ತೂರು ತಾಲೂಕಿನ 11 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಹೆಚ್ಚು ಜನ ವಾಸವಿರುವ ಪರಿಸರದ ದೃಷ್ಟಿಯಿಂದ ಮಹತ್ವವಿಲ್ಲದ ಊರು, ಪಟ್ಟಣ, ನಗರಗಳನ್ನು ಕಲ್ಚರಲ್ ಲ್ಯಾಂಡ್ ಸ್ಕೇಪ್ ಎಂದು ಕರೆಯಲಾಗುತ್ತದೆ. ಅಂತೆಯೇ ಬಿರುಮಲೆ ಬೆಟ್ಟದಂತಹ ಪ್ರದೇಶವನ್ನು ನ್ಯಾಚುರಲ್ ಲ್ಯಾಂಡ್ ಸ್ಕೇಪ್ ಎಂದು ಕರೆಯಲಾಗುತ್ತದೆ. ಇಂತಹ ಪರಿಸರ ಸೂಕ್ಷ್ಮ ಪ್ರದೇಶ ಯಾ ಬೆಟ್ಟದಲ್ಲಿ ಕಟ್ಟಡ ಕಟ್ಟುವುದಕ್ಕೆ, ಟೌನ್ ಶಿಪ್ ನಿರ್ಮಾಣಕ್ಕೆ, ಮಾರ್ಗಗಳ ನಿರ್ಮಾಣಕ್ಕೆ ನಿರ್ಬಂಧವಿದೆ, ನಿಯಂತ್ರಕ ಕ್ರಮಗಳಿವೆ.
ಆದರೆ ಪ್ರಕೃತಿ ಜತೆ ಮನುಷ್ಯನ ಚೆಲ್ಲಾಟ ಇಂದು ನಿನ್ನೆಯದ್ದಲ್ಲ. ಬಿರುಮಲೆಯ ಬಾಹುಗಳನ್ನು ಕಡಿದು ನೆಲಸಮಗೊಳಿಸಿ ಬೆಟ್ಟದ ಸುತ್ತಲು ಈಗ ಹಲವು ಜನ ವಸತಿಯನ್ನು ನಿರ್ಮಿಸಲಾಗಿದೆ. ಈ ಹಿಂದೆ ಮಳೆಗಾಲದಲ್ಲಿ ಬೆಟ್ಟದ ಮೇಲೆ ಬಿದ್ದ ಮಳೆನೀರು ನೇರವಾಗಿ ಕೆಳಗೆ ಹರಿದು ಹೋಗುತ್ತಿತ್ತು. ಆದರೆ ಈಗ ಕಡಿದು ನೆಲಸಮಗೊಳಿಸಿದ ಭೂಮಿಯಲ್ಲಿ ಬಿದ್ದ ಮಳೆ ನೀರು ಅಲ್ಲಿಯೇ ಭೂಮಿಯ ಒಡಲು ಸೇರುತ್ತಿದೆ. ಇದರಿಂದ ಹೆಚ್ಚಾಗುವ ನೀರನ ಒರತೆ ಬೆಟ್ಟದ ಸಮತೋಲನವನ್ನು ಹಾಳುಗೆಡವಿದೆ. ಒಂದೆರಡು ವರ್ಷಗಳ ಹಿಂದೆ ಪಕ್ಕದ ಕೊಡಗು ಮತ್ತು ಕೇರಳದಲ್ಲಿ ಸಂಭವಿಸಿದಂತೆ ಇಲ್ಲಿಯೂ ಬೆಟ್ಟ ಕುಸಿತದ ಭಯ ತಪ್ಪಿದ್ದಲ್ಲ. ಇದರಿಂದಾಗುವ ಅನಾಹುತ ಊಹಿಸಲಸಾಧ್ಯ.
ಪ್ರಕೃತಿಯ ರುದ್ರ ತಾಂಡವದ ಮುಂದೆ ನಾವು ಕೈಕಟ್ಟಿ ನಿಲ್ಲಬೇಕಾದ ಪ್ರಮೇಯ ಬಂದರೂ ಬರಬಹುದು. ಬೆಟ್ಟ ಕಡಿದು ಮನೆ ನಿರ್ಮಿಸಿದವನಿಗೆ, ರಸ್ತೆ ನಿರ್ಮಿಸಿದವನಿಗೆ ಆಧುನಿಕ ಭಗೀರಥನೆಂದು ಬಿರುದು ಕೊಡುವ ನಾವೇ ಇದಕ್ಕೆಲ್ಲಾ ಹೊಣೆ, ಕಾರಣ ಎಂಬ ಅರಿವು ನಮಗಿದ್ದರೂ ಒಪ್ಪಿಕೊಳ್ಳಲು ಮಾತ್ರ ತಯಾರಿಲ್ಲ. ಕಾರಣ ಪ್ರಕೃತಿಯನ್ನು ನಾವು ನಮ್ಮ ಲಾಭಕ್ಕಾಗಿ ಅಂದೂ… ಇಂದೂ ನಮಗೆ ಬೇಕಾದಂತೆ ಬಳಸಿಕೊಂಡು ಬಂದಿದ್ದೇವೆ. ಆದರೆ ಪ್ರಕೃತಿ ಪೂರ್ತಿಯಾಗಿ ಎಂದೂ ನಮ್ಮ ವಶವಾಗಿಲ್ಲ. ಯಾವ ಕ್ಷಣ ಅದು ತನ್ನ ವಿಶಾಲ ಶಕ್ತಿಯನ್ನು ಪ್ರದರ್ಶಿಸುತ್ತದೋ ಬಲ್ಲವರಿಲ್ಲ.
ಭೂಮಿ ಪ್ರಕೃತಿ. ವಿನಾಶದ ಘಟನೆಗಳು ಸಂಭವಿಸಿದಾಗ ನೂರಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. ನೂರಾರು ಪ್ರಶ್ನೆಗಳನ್ನು ಜನ ಹಾಕಿಕೊಳ್ಳುತ್ತಾರೆ. ಭೂಗರ್ಭ ಶಾಸ್ತ್ರಜ್ಞರು, ವಿಜ್ಞಾನಿಗಳು, ಅಧಿಕಾರಿಗಳು ಮತ್ತು ರಾಜಕಾರಣಿಗಳು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದರೆ ಪ್ರತೀ ಸಮಾಜ ಪ್ರಚಲಿತವಿರುವ ಅಂಧ ವಿಶ್ವಾಸಗಳ ಅನುಸಾರ ಪ್ರತಿಕ್ರಿಯಿಸುತ್ತದೆ. ಆದರೆ ಸುರಿಯುವ ಬಿರುಮಳೆಗೆ ಕುಸಿಯಲಿದೆಯೇ ಬಿರುಮಲೆ ಎನ್ನುವ ಪ್ರಶ್ನೆಗೆ ಮಾತ್ರ ಯಾರಲ್ಲೂ ಉತ್ತರ ಸಿಕ್ಕಿಲ್ಲ.