ಮಂಗಳೂರು: ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮೂಲಕ ಪಕ್ಷಕ್ಕೆ ಶಕ್ತಿ ನೀಡಿದ್ದರಿಂದ 99 ಮಂದಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಈಗ ಮತ್ತೆರಡು ಮಂದಿ ಪಕ್ಷ ಸೇರಿ ಒಟ್ಟು ಸಂಖ್ಯೆ 101 ಆಗಿದೆ. ಇಂಡಿಯಾ ಒಕ್ಕೂಟಕ್ಕೆ ಪ್ರಬಲ ವಿಪಕ್ಷವಾಗಿ ಕೆಲಸ ಮಾಡುವ ಅವಕಾಶ ಬಂದಿದ್ದು ಸಮಸ್ಯೆ, ಸವಾಲು ಎದುರಿಸಿ ಕೈ ಪಕ್ಷ ಮುನ್ನಡೆಸುವ ಕೆಲಸ ಮಾಡಿದ್ದಾರೆ. ಪಾರ್ಲಿಮೆಂಟ್ ನಿಂದ ಹೊರ ಹಾಕಿದ್ದರೂ ಇಂದು ಅತೀ ಪ್ರಮುಖವಾದ ವಿಪಕ್ಷ ಸ್ಥಾನ ಅಲಂಕರಿಸಿದ್ದು ಉತ್ತಮ ರೀತಿಯಲ್ಲಿ ನಿಭಾಯಿಸಲಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನೂತನವಾಗಿ ಆಯ್ಕೆಯಾದ ಎಂ.ಎಸ್ ಮಹಮ್ಮದ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಪಕ್ಷ ನನಗೆ ಹಲವು ಸ್ಥಾನಗಳನ್ನು ನೀಡಿದೆ. ಈಗ ನನ್ನ ಕೆಲಸ ಗುರುತಿಸಿ ಕೆಪಿಸಿಸಿ ಪ್ರ.ಕಾರ್ಯದರ್ಶಿಯಾಗಿ ನೇಮಕ ಮಾಡಿದೆ. ಸುಳ್ಯ ಕ್ಷೇತ್ರದ ಉಸ್ತುವಾರಿ ನೀಡಿದ್ದು, ಎರಡೂ ಚುನಾವಣೆಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಕೆಪಿಸಿಸಿ ಗೆ 5 ಕಾರ್ಯಾಧ್ಯಕ್ಷರಿದ್ದು, ಅವರೊಂದಿಗೆ ಕೈ ಜೋಡಿಸಿ ಕೆಲಸ ಮಾಡಲು 5 ಪ್ರ.ಕಾರ್ಯದರ್ಶಿಗಳನ್ನು ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆದೇಶ ಮಾಡಿದ್ದು ದ.ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಹೊಂದಿರುವ ಮಂಜುನಾಥ ಭಂಡಾರಿಯವರೊಂದಿಗೆ ಈಗಾಗಲೇ ಕೆಪಿಸಿಸಿ ಪ್ರ. ಕಾರ್ಯದರ್ಶಿಯಾಗಿರುವ ನನ್ನನ್ನು 5 ಜಿಲ್ಲೆಗಳ ಉಸ್ತುವಾರಿ ಪ್ರ.ಕಾರ್ಯದರ್ಶಿಯಾಗಿ ನೇಮಕಗೊಳಿಸಿದ್ದು ಅವರ ಜತೆ ಕೆಲಸ ಮಾಡಲಿದ್ದೇನೆ. ಮುಂದಿನ ವಾರದಿಂದ 5 ಜಿಲ್ಲೆಗಳಿಗೆ ಪ್ರವಾಸ ಮಾಡಲಿದ್ದೇವೆ ಎಂದು ಹೇಳಿದರು.
ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಲಿದ್ದೇನೆ. ಜಿಪಂ. ತಾಪಂ ಎಲೆಕ್ಷನಲ್ಲಿ ಕೈ ಪಕ್ಷವನ್ನು ಅಧಿಕಾರಕ್ಕೆ ತರುವ ತೀರ್ಮಾನ ಮಾಡಿದ್ದೇವೆ. ಈ ಹಿಂದೆ ಜಿಪಂ ನ 31 ಸದಸ್ಯರ ಪೈಕಿ 30 ಕಾಂಗ್ರೆಸ್ ಸದಸ್ಯರಿದ್ದರು. ಮರಳಿ ಆಡಳಿತ ಕೈಗೆ ತರಲು ಎಲ್ಲರನ್ನೂ ಸೇರಿಸಿಕೊಂಡು ಶ್ರಮ ಮಾಡ್ತೇವೆ. ಜಿಲ್ಲಾ ಅಧ್ಯಕ್ಷರ ಬದಲಾವಣೆ ವರಿಷ್ಠರ ತೀರ್ಮಾನ. ನನ್ನ ಹೆಸರು ಬಂದರೆ ಸಂತೋಷ. ಜವಾಬ್ದಾರಿ ನೀಡಿದರೆ ಸಂತೋಷದಿಂದ ಸ್ವೀಕರಿಸ್ತೇನೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ನೀರಜ್ ಪಾಲ್, ನಝೀರ್ ಬಜಾಲ್, ಸುಭಾಶ್ ಶೆಟ್ಟಿ ಉಪಸ್ಥಿತರಿದ್ದರು.