ಆನ್‌ಲೈನ್ ವಂಚನೆ – ₹ 11 ಲಕ್ಷ ಕಳೆದುಕೊಂಡ ವ್ಯಕ್ತಿಯಿಂದ ದೂರು ದಾಖಲು

ಮಂಗಳೂರು: ಆನ್‌ಲೈನ್‌ ಉದ್ಯೋಗದ ಕುರಿತು ಫೇಸ್‌ಬುಕ್‌ ಪುಟದಲ್ಲಿ ಕಂಡ ಜಾಹೀರಾತು ನಂಬಿ ₹ 11.02 ಲಕ್ಷ ವಂಚನೆಗೆ ಒಳಗಾದ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದು, ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂನ್ 25ರಂದು ಫೇಸ್ ಬುಕ್ ಖಾತೆಯಲ್ಲಿ ಆನ್‌ಲೈನ್ ಉದ್ಯೋಗದ ಕುರಿತ ಕೊಂಡಿಯನ್ನು ಕ್ಲಿಕ್ಕಿಸಿದ್ದೆ. ಬಳಿಕ ಅವರು ನೀಡಿದ ಟಾಸ್ಕ್‌ ಪೂರ್ಣಗೊಳಿಸಿದ್ದಕ್ಕೆ ನನ್ನ ಖಾತೆಗೆ ₹ 120 ಜಮೆಯಾಗಿತ್ತು. ನಂತರ ಟೆಲಿಗ್ರಾಮ್ ಕೊಂಡಿಯನ್ನು ಕಳುಹಿಸಿ ಆ್ಯಪ್‌ ಡೌನ್‌ಲೋಡ್‌ ಮಾಡಲು ಸೂಚಿಸಿ ವಿವಿಧ ಟಾಸ್ಕ್‌ ನೀಡಿದ್ದರು. ಅದರಂತೆ ಜೂನ್‌ 26ರಂದು ಬೇರೆ ಬೇರೆ ಬ್ಯಾಂಕ್‌ ಖಾತೆಗಳಿಂದ ₹ 1 ಸಾವಿರ ಹಾಗೂ ₹ 25 ಸಾವಿರ , ಜೂನ್‌ 27ರಂದು ₹ 1.20 ಲಕ್ಷ ವರ್ಗಾಯಿಸಿದ್ದೆ. ಅದೇ ದಿನ ನನ್ನ ಖಾತೆಗೆ ₹ 10 ಸಾವಿರ ಜಮೆಯಾಗಿತ್ತು. ಜೂನ್‌ 28ರಂದು ₹ 2.07 ಲಕ್ಷ, ₹ 1.50 ಲಕ್ಷ, ಹಾಗೂ ₹ 1 ಲಕ್ಷವನ್ನು ಅವರು ಸೂಚಿಸಿದ ಖಾತೆಗಳಿಗೆ ವರ್ಗಾಯಿಸಿದ್ದೆ. ಜೂನ್ 29ರಂದು ₹ 1 ಲಕ್ಷ ನನ್ನ ಖಾತೆಗೆ ಜಮೆಯಾಗಿತ್ತು. ಅದೇ ದಿನ ₹ 1 ಲಕ್ಷ ಮತ್ತು ₹ 2 ಲಕ್ಷ ಹಾಗೂ ಜೂನ್ 30ರಂದು ಮತ್ತೆ ₹ 2 ಲಕ್ಷವನ್ನು ವರ್ಗಾಯಿಸಿದ್ದೆ. ನಾನು ಕಟ್ಟಿದ ಮೊತ್ತ ಹಾಗೂ ಲಾಭಾಂಶ ಸೇರಿ ನನ್ನ ಖಾತೆಯಲ್ಲಿ ₹ 20.93 ಲಕ್ಷ ಹಣವಿರುವುದಾಗಿ ಆ್ಯಪ್‌ ತೋರಿಸುತ್ತಿದೆ. ಅದನ್ನು ಮರಳಿ ಪಡೆಯಲು ಶೇ 30ರಷ್ಟು ತೆರಿಗೆ (₹ 6.27 ಲಕ್ಷ) ಕಟ್ಟಲು ಹೇಳುತ್ತಿದ್ದಾರೆ. ಆ ಮೊತ್ತವನ್ನು ಕಡಿತಗೊಳಿಸಿ ಹಣ ಮರಳಿಸುವಂತೆ ಕೇಳಿದರೆ ಒಪ್ಪುತ್ತಿಲ್ಲ. ಒಟ್ಟು ₹ 11.02 ಲಕ್ಷ ಹಣವನ್ನು ಕಳೆದುಕೊಂಡಿದ್ದೇನೆ ಎಂದು ದೂರಿನಲ್ಲಿ ಹೇಳಲಾಗಿದೆ.  ಉರ್ವ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here