ಮಂಗಳೂರು: ಮಂಗಳೂರು ನಗರದ ಕೊಣಾಜೆ ಮತ್ತು ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ 2-3 ತಿಂಗಳಿನಿಂದ ನಡೆದಿದ್ದ ವಿವಿಧ ದರೋಡೆ ಪ್ರಕರಣಗಳನ್ನು ಮಂಗಳೂರು ಪೊಲೀಸರು ಬೇಧಿಸಿದ್ದಾರೆ.
ಕುಂದಕಟ್ಟೆ ಚೆಕ್ ಪೋಸ್ಟ್ ನಲ್ಲಿ ರಾತ್ರಿ 3 ಗಂಟೆಗೆ ತಪಾಸಣೆ ವೇಳೆ ಖದೀಮರ ತಂಡ ಸಿಕ್ಕಿ ಬಿದ್ದಿದೆ. ಜು.10ರಂದು ರಾತ್ರಿ 3 ಗಂಟೆ ವೇಳೆಗೆ ಅನುಮಾನಾಸ್ಪದವಾಗಿ ಬರುತ್ತಿದ್ದ ಸ್ವಿಫ್ಟ್ ಕಾರು ತಪಾಸಣೆ ನಡೆಸಿದ ಪಿಎಸ್ಐ ವಿನೋದ್ ಮತ್ತು ಸಿಬ್ಬಂದಿಗಳ ತಂಡ ಆರೋಪಿಗಳನ್ನು ಬಂಧಿಸಿದೆ. ತಪಾಸಣೆ ವೇಳೆ ಕಾರಿನಲ್ಲಿ 2 ಡ್ರ್ಯಾಗನ್, 3 ಡಮ್ಮಿ ಪಿಸ್ತೂಲ್, ಮಂಕಿ ಕ್ಯಾಪ್, ಹ್ಯಾಂಡ್ ಗ್ಲೌಸ್, ಸೇರಿ ದರೋಡೆ ಬಳಸುವ ಆಯುಧಗಳು ಪತ್ತೆಯಾಗಿದ್ದು ಕಾರಿನಲ್ಲಿದ್ದ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಮಂಜೆಶ್ವರ ನಿವಾಸಿ ಮಹಮ್ಮದ್ ಸಿಯಾಬ್, ಬಜಪೆ ನಿವಾಸಿಗಳಾದ ಮಹಮ್ಮದ್ ಅರ್ಫಾಝ್, ಸಫ್ವಾನ್ ಬಂಧನಕ್ಕೆ ಒಳಗಾದ ಆರೋಪಿಗಳು. ಬಂಧಿತ ಆರೋಪಿಗಳು ಕೊಣಾಜೆ ಠಾಣೆಯಲ್ಲಿ ನಡೆದ ಮೂರು ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ತನಿಖೆ ವೇಳೆ ಕೃತ್ಯದಲ್ಲಿ ಭಾಗಿಯಾದ ಮಹಮ್ಮದ್ ಜಂಶೀರ್ ನನ್ನು ಬಂಧಿಸಲಾಗಿದೆ. ದ.ಕ ,ಉಡುಪಿ, ಕಾಸರಗೋಡು,ಹಾಸನದಲ್ಲಿ ಮನೆಗಳ್ಳತನ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದು ಒಟ್ಟು 9,25,000 ಮೌಲ್ಯ ಸ್ವತ್ತು ಕಳವು ಮಾಡಲಾಗಿತ್ತು. ಆರೋಪಿಗಳಿಂದ 130 ಗ್ರಾಂ ತೂಕದ ಚಿನ್ನಾಭರಣ, 1 ವಾಚ್, ಕಾರು ಸೇರಿ ಒಟ್ಟು 12.5೦ ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಮಂಗಳೂರು ನಗರ ವ್ಯಾಪ್ತಿಯ ಕಂಕನಾಡಿಯಲ್ಲಿ ನಡೆದಿದ್ದ ದರೋಡೆ ಪ್ರಕರಣದ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿರುವುದಾಗಿ ಆಯುಕ್ತರು ಮಾಹಿತಿ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಕಂಕನಾಡಿಯ ದಿನಸಿ ಅಂಗಡಿಯಲ್ಲಿ 10 ಲಕ್ಷ ರೂಪಾಯಿ ದರೋಡೆ ನಡೆದಿತ್ತು.
ಘಟನೆಗೆ ಸಂಬಂಧ ಪಟ್ಟಂತೆ ಆರೋಪಿಗಳಿಬ್ಬರು ಮುಂಜಾನೆ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಆಟೋ ಮೂಲಕ ತೆರಳಿದ್ದ ಬಗ್ಗೆ ತನಿಖೆ ವೇಳೆ ಸ್ಥಳೀಯ ಆಟೋ ಚಾಲಕ ನೀಡಿದ್ದ ಮಾಹಿತಿ ಆಧಾರಿಸಿ ತನಿಖೆ ಮುಂದುವರಿಸಿದ ಪೊಲೀಸರಿಗೆ ಹಿಂದಿ ಮಾತನಾಡುತ್ತಿದ್ದ ಇಬ್ಬರು ಆರೋಪಿಗಳು ಎರ್ನಾಕುಲಂ ಪೂಣೆ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ ಬಗ್ಗೆ ಸಿಸಿಟಿವಿ ದೃಶ್ಯ ಪರಿಶೀಲನೆ ವೇಳೆ ಗಮನಕ್ಕೆ ಬಂದಿತ್ತು.
ಈ ಬಗ್ಗೆ ರೈಲ್ವೆ ಅಧಿಕಾರಿಗಳ ಮೂಲಕ ರೈಲ್ವೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ ಮಂಗಳೂರು ಪೊಲೀಸರಿಗೆ ಸದ್ರಿ ರೈಲು ಮಹಾರಾಷ್ಟ್ರದ ಸತಾರ ದಾಟಿರುವ ಬಗ್ಗೆ ಮಾಹಿತಿ ದೊರಕಿತ್ತು. ಹೆಚ್ಚು ಸಮಯ ವ್ಯಯಿಸದೆ ಮಂಗಳೂರು ನಗರ ಪೊಲೀಸ್ ಆಯುಕ್ತರು ನೀಡಿದ ಮಾಹಿತಿಯಂತೆ ಪೂನಾ ಪೊಲೀಸರು ರೈಲು ತಡೆದು ಆರೋಪಿಗಳನ್ನು ಬಂಧಿಸಿದ್ದಾರೆ. ನಂತರದ ಬೆಳವಣಿಗೆಯಲ್ಲಿ ಮಂಗಳೂರಿನಿಂದ ಪೂನಾಕ್ಕೆ ತೆರಳಿದ ಪೊಲೀಸರು ಬಂಧಿತ ಆರೋಪಿಗಳನ್ನು ನಗರಕ್ಕೆ ಕರೆತಂದಿದ್ದಾರೆ. ಆರೋಪಿಗಳಿಂದ ಒಟ್ಟು ಹತ್ತು ಲಕ್ಷದ ಹದಿಮೂರು ಸಾವಿರ ರೂಪಾಯಿ ವಶಪಡಿಸಿಕೊಳ್ಳಲಾಗಿದ್ದು ಉತ್ತರ ಪ್ರದೇಶ ಮೂಲದ ಮಹಮ್ಮದ್ ನಝೀರ್ ಹೌಸಿಲ್, ಇಲ್ಯಾಸ್ ಖಾನ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು ತನಿಖೆ ಮುಂದುವರೆದಿದೆ ಎಂದು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ನಗರ ಪೊಲೀಸ್ ಆಯುಕ್ತ ಅನುಪಮ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಘಟನೆ ನಡೆದ 23 ಗಂಟೆಯೊಳಗೆ ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.