ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಹುಡುಕಿ ತೆಗೆಯುವ ಕೆಲಸವನ್ನು ಶಿಕ್ಷಕರು ಮಾಡುತ್ತಾರೆ. ಒಬ್ಬ ಶಿಕ್ಷಕ ಪ್ರಪಂಚದ ಎಲ್ಲಾ ಹುದ್ದೆಗಳಿಗೂ ಅರ್ಹನಾಗಿರುತ್ತಾನೆ ಎಂದು ಪುತ್ತೂರು ನಗರ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹೇಳಿದ್ದಾರೆ.
ಜು.11ರಂದು ಇಎಸ್ಆರ್ ಪ್ರೆಸಿಡೆನ್ಸಿ ಸ್ಕೂಲ್ ಮರೀಲ್ ಇದರ ನೂತನ ಶಾಲಾ ಮಂತ್ರಿಮಂಡಲವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ನಾಯಕತ್ವ ಎನ್ನುವುದು ಶಾಲಾ ಹಂತದಿಂದಲೇ ಪ್ರಾರಂಭವಾಗಬೇಕು. ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಮೊಬೈಲ್ ನಂತಹ ಅತ್ಯಂತ ಮಾರಕ ವಸ್ತುವಿನಿಂದ ದೂರವಿರಬೇಕು. ಮೊಬೈಲ್ ನಮ್ಮನ್ನು ಜೀವನ ಪೂರ್ತಿ ತಲೆತಗ್ಗಿಸುವಂತೆ ಮಾಡುತ್ತದೆ. ಆದರೆ ಒಂದು ಪುಸ್ತಕ ನಮ್ಮನ್ನು ಜೀವನ ಪೂರ್ತಿ ನಮ್ಮನ್ನು ತಲೆ ಎತ್ತಿ ನಡೆಯುವಂತೆ ಮಾಡುತ್ತದೆ. ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಅತ್ಯಂತ ಸುಸಂಸ್ಕೃತ ರೀತಿಯಲ್ಲಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಎಸ್ಆರ್ ಪ್ರೆಸಿಡೆನ್ಸಿ ಶಾಲೆಯ ಸಂಚಾಲಕರಾದ ಝಾಕಿರ್ ಹುಸೇನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ ಎಂ, ಪೊಲೀಸ್ ಪೇದೆ ಶ್ರೀಮಂತ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯ ವಿ.ಕೆ ಶರೀಫ್, ಮಕ್ಸೂದ್, ಮೊಹಮ್ಮದ್ ಆಶಿಫ್, ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷ ಸಿರಾಜ್, ಗೌರವಾಧ್ಯಕ್ಷ ಅಬ್ದುಲ್ ಹಮೀದ್ ಹಾಗೂ ಮುಖ್ಯೋಪಾಧ್ಯಾಯಿನಿ ವಿಸ್ಮಿತ ಮಧುಕರ್ ಕುರಮಜಲುಗುತ್ತು ಉಪಸ್ಥಿತರಿದ್ದರು.
ಶಾಲಾ ಮಂತ್ರಿಮಂಡಲಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಅತಿಥಿ ಗಣ್ಯರು ಸ್ಯಾಶ್ ಹಾಗೂ ಬ್ಯಾಡ್ಜ್ ತೊಡಿಸುವುದರ ಮೂಲಕ ಅಭಿನಂದನೆ ಸಲ್ಲಿಸಿದರು. ಮಂತ್ರಿಮಂಡಲದ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯನಿ ವಿಸ್ಮಿತ ಮಧುಕರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗಾಗಿ ರಚಿಸಲಾದ ಲಿಟರರಿ ಸೈನ್ಸ್ ಮತ್ತು ಇಕೋ ಕ್ಲಬ್ ಗಳ ಉದ್ಘಾಟನೆಯನ್ನು ಸಹಾಯಕ ಠಾಣಾಧಿಕಾರಿ ಕೃಷ್ಣಪ್ಪ ನೆರವೇರಿಸಿದರು. ವಿದ್ಯಾರ್ಥಿಗಳು ತಮ್ಮ ಕ್ಲಬ್ ಗಳಿಗೆ ಸಂಬಂಧಪಟ್ಟ ಮಾದರಿಗಳೊಂದಿಗೆ ಅಣಕು ಪ್ರದರ್ಶನ ನೀಡುವ ಮೂಲಕ ಅತಿಥಿಗಳ ಮನ ಸೆಳೆದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಾಯಕ ಜಿಹಾನ್ ಇಬ್ರಾಹಿಂ ಅತಿಥಿಗಳನ್ನು ಸ್ವಾಗತಿಸಿದರೆ, ಸಹ ಶಿಕ್ಷಕಿ ರಾಹಿಲ ವಂದಿಸಿದರು. ಕಾರ್ಯಕ್ರಮವನ್ನು ಶಿಕ್ಷಕಿಯರಾದ ಶಿಫಾನ ವಾಸಿಫ್ ಹಾಗೂ ಕು.ಸಯೀದಾ ನಿರೂಪಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಬೋಧಕೇತರ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.