ಮಂಗಳೂರು (ಹೊಸದಿಲ್ಲಿ): 7 ರಾಜ್ಯಗಳ ವಿಧಾನಸಭೆಯ ಒಟ್ಟು ಹದಿಮೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಒಂಭತ್ತು ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಗೆಲುವು ಸಾಧಿಸಿದೆ.
ಮುಖ್ಯಮಂತ್ರಿ ಸುಖ್ವೀಂದರ್ ಸಿಂಗ್ ಸುಖು ಅವರ ಪತ್ನಿ ಹಾಗೂ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಕಮಲೇಶ್ ಪಾಟೀಲ್ ಅವರು ಹಿಮಾಚಲ ಪ್ರದೇಶದ ದೆಹ್ರಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ.
ಮೈತ್ರಿಕೂಟದ ಅಂಗಪಕ್ಷವಾಗಿರುವ ಆಮ್ ಆದ್ಮಿ ಪಾರ್ಟಿ, ಪಂಜಾಬ್‍ನ ಜಲಂಧರ್ ಪಶ್ಚಿಮ ಕ್ಷೇತ್ರವನ್ನು ಗೆದ್ದುಕೊಂಡಿದೆ. ಆಮ್ ಆದ್ಮಿ ಪಕ್ಷದ ಮೋಹಿಂದರ್ ಭಗತ್ ಈ ಕೇತ್ರದಿಂದ 30 ಸಾವಿರಕ್ಕೂ ಅಧಿಕ ಮತಗಳ ಗೆಲುವು ಸಾಧಿಸಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಪಶ್ಚಿಮ ಬಂಗಾಲದ ಎಲ್ಲ ನಾಲ್ಕು ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ತಮಿಳುನಾಡಿನಲ್ಲಿ ಡಿಎಂಪಿ ಅಭ್ಯರ್ಥಿ ಅಣ್ಣಿಯೂರು ಸಿವಾ ಅವರು ವಿಕ್ರವಂಡಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಉತ್ತರಾಖಂಡದ ಮಂಗಲೋರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಖ್ವಾಝಿ ಮೊಹ್ಮದ್ ನಿಜಾಮುದ್ದೀನ್ ಜಯಗಳಿಸಿದ್ದಾರೆ. ಅಮರವಾಡ ಕ್ಷೇತ್ರ ಸೇರಿದಂತೆ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮೈತ್ರಿ ಕೂಟದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. 10 ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಗೆಲುವು ಸಾಧಿಸಿದ್ದು ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.