ದ.ಕ. ಜಿಲ್ಲೆಯಲ್ಲಿ ಡೆಂಗ್ಯೂ ವಾರ್ ರೂಂ ಆರಂಭ – ಬಿಎಸ್ ವೈಗೆ ಹೈಕೋರ್ಟ್ ರಿಲೀಫ್ – ʼಪವರ್ ಟಿವಿʼ ಪ್ರಸಾರ ನಿರ್ಬಂಧಕ್ಕೆ ಸುಪ್ರೀಂ ಕೋರ್ಟ್‌ ತಡೆ – 47 ಕೋಟಿ ಹಗರಣ ಆರೋಪದಡಿ ಮಾಜಿ ಬಿಜೆಪಿ ಶಾಸಕ ಸಿಐಡಿ ವಶಕ್ಕೆ

ಮಂಗಳೂರು: ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡೆಂಗ್ಯೂ ವಾರ್ ರೂಂ ಆರಂಭಿಸಲಾಗಿದೆ.

ಡೆಂಗ್ಯೂ ಉಲ್ಬಣ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಡೆಂಗ್ಯೂ ನಿಯಂತ್ರಣದ ಕುರಿತು ವಾರ್ ರೂಂ ಅನ್ನು ಜುಲೈ 13 ರಿಂದ ಸಕ್ರಿಯಗೊಳಿಸಲಾಗಿದೆ. ವಾರ್ ರೂಂ ಸಂಖ್ಯೆ 9449843255 ಆಗಿದ್ದು, ಜಿಲ್ಲೆಯ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಡೆಂಗ್ಯೂ ನಿಯಂತ್ರಣದಲ್ಲಿ ಸಹಕರಿಸುವಂತೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಎಸ್ ವೈಗೆ ಹೈಕೋರ್ಟ್ ರಿಲೀಫ್

ಮಗುವಿಗೆ ಲೈಂಗಿಕ ದೌರ್ಜನ್ಯ ಎಸಗಿ ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಬಿ ಎಸ್ ಯಡಿಯೂರಪ್ಪಗೆ ಹೈಕೋರ್ಟ್ ಮತ್ತೆ ರಿಲೀಫ್ ನೀಡಿದೆ‌. ಈ ಹಿಂದೆ ಯಡಿಯೂರಪ್ಪರನ್ನು ಬಂಧಿಸದಂತೆ ಆದೇಶಿಸಿದ್ದ ಹೈಕೋರ್ಟ್, ಶುಕ್ರವಾರ(ಜು.12) ಯಡಿಯೂರಪ್ಪ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗುವುದರಿಂದಲೂ ವಿನಾಯಿತಿ ನೀಡಿದೆ.

ಬಿ ಎಸ್ ಯಡಿಯೂರಪ್ಪ ವಿಚಾರಣೆಗೆ ಹಾಜರಾಗುತ್ತಾರೆ. ಹಾಗಾಗಿ ಬಂಧಿಸಬಾರದು. ವಿಚಾರಣೆ ನಡೆಯಲಿ ಎಂದು ಬಿ ಎಸ್ ಯಡಿಯೂರಪ್ಪ ಪರ ವಕೀಲರು ಹೈಕೋರ್ಟ್ ನಲ್ಲಿ ಈ ಹಿಂದೆ ಮನವಿ ಮಾಡಿದ್ದರಿಂದ ಹೈಕೋರ್ಟ್ ಬಂಧನದಿಂದ ರಿಲೀಫ್ ನೀಡಿತ್ತು. ಶುಕ್ರವಾರ ನಡೆದ ಹೈಕೋರ್ಟ್ ಕಲಾಪದಲ್ಲಿ ಜು.15 ರಂದು ಪೋಕ್ಸೋ ಪ್ರಕರಣ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಆದರೆ ಬಿ ಎಸ್ ಯಡಿಯೂರಪ್ಪ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡಬೇಕು ಎಂದು ಯಡಿಯೂರಪ್ಪ ಪರ ವಕೀಲರು ಮನವಿ ಮಾಡಿದರು. ಯಡಿಯೂರಪ್ಪ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್ ಯಡಿಯೂರಪ್ಪ ಹೈಕೋರ್ಟ್ ಕಲಾಪದ ಮುಂದಿನ ದಿನಾಂಕದವರೆಗೆ ನ್ಯಾಯಾಲಯಕ್ಕೆ ಹಾಜರಾಗುವುದಕ್ಕೆ ವಿನಾಯಿತಿ ನೀಡಿದೆ.

ʼಪವರ್ ಟಿವಿʼ ಪ್ರಸಾರ ನಿರ್ಬಂಧಕ್ಕೆ ಸುಪ್ರೀಂ ಕೋರ್ಟ್‌ ತಡೆ

ಪರವಾನಗಿ ಇಲ್ಲದ ಕಾರಣ ಪವರ್‌ ಟಿವಿಯ ಪ್ರಸಾರ ನಿರ್ಬಂಧಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ಪವರ್‌ ಟಿವಿಯ ಬ್ಲ್ಯಾಕ್‌ಔಟ್ ಕ್ರಿಯೆಯನ್ನು ರಾಜಕೀಯ ಸೇಡು ಎಂದು ಬಣ್ಣಿಸಿದ್ದು, ವಾಹಿನಿಯ ಧ್ವನಿಯನ್ನು ಸಂಪೂರ್ಣವಾಗಿ ಕುಗ್ಗಿಸುವ ಉದ್ದೇಶವಿದು ಎಂದು ಹೇಳಿದೆ. ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಮತ್ತು ಅವರ ಸಹೋದರ ಸೂರಜ್ ರೇವಣ್ಣ ಅವರ ಲೈಂಗಿಕ ಹಗರಣದ ಕುರಿತು ‘ಪವರ್ ಟಿವಿ’  ವಿಸ್ತೃತ ವರದಿ ಪ್ರಸಾರವನ್ನು ಮಾಡಿತ್ತು. ನಮಗೆ ಇದು ರಾಜಕೀಯ ದ್ವೇಷ ಎಂದು ಮನವರಿಕೆಯಾಗುತ್ತದೆ. ಅವರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವುದು ರಾಜ್ಯದ ಕರ್ತವ್ಯವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ. ಪವರ್ ಟಿವಿ ಚಾನೆಲ್‌ನ ಪರವಾನಗಿ 2021 ರಲ್ಲಿ ಅವಧಿ ಮುಗಿದಿದೆ ಎಂದು ಕಂಡು ಬಂದ ನಂತರ ಕರ್ನಾಟಕ ಹೈಕೋರ್ಟ್ ಜು.9 ರವರೆಗೆ ಪ್ರಸಾರ ಚಟುವಟಿಕೆಯಿಂದ ನಿರ್ಬಂಧಿಸಿತ್ತು.

47 ಕೋಟಿ ಹಗರಣ ಆರೋಪದಡಿ ಮಾಜಿ ಬಿಜೆಪಿ ಶಾಸಕ ಸಿಐಡಿ ವಶಕ್ಕೆ

ರಾಜ್ಯದಲ್ಲಿ ಮುಡಾ, ವಾಲ್ಮೀಕಿ ನಿಗಮ ಹಗರಣದ ಸುದ್ದಿಯ ನಡುವೆ ಮತ್ತೊಂದು ಹಗರಣ ಮುನ್ನೆಲೆಗೆ ಬಂದಿದ್ದು, ಬಿಜೆಪಿಯ ಮಾಜಿ ಶಾಸಕ ಡಿ.ಎಸ್‌. ವೀರಯ್ಯ ಅವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮೈಸೂರಿನ ದೇವರಾಜ ಅರಸು ಟ್ರಕ್ ಟರ್ಮಿನಲ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕೋಟ್ಯಾಂತರ ರೂಪಾಯಿ ಹಗರಣಕ್ಕೆ ಸಂಬಂಧಿಸಿದ ಆರೋಪದಡಿ ವೀರಯ್ಯ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ‌. 2021-23 ನಡುವೆ ಅವರು ಅಧ್ಯಕ್ಷರಾಗಿದ್ದಾಗ 47 ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಅರಸು ಟ್ರಕ್ ಟರ್ಮಿನಲ್ ವ್ಯವಸ್ಥಾಪಕ ನಿರ್ದೇಶಕ 2023ರ ಸೆ.23ರಂದು ನೀಡಿದ್ದ ದೂರಿನ್ವಯ ತನಿಖೆ ಕೈಗೊಂಡ ಸಿಐಡಿ, ಇದೀಗ ವೀರಯ್ಯ ಅವರನ್ನು ಬಂಧಿಸಿದೆ. 2021ರ ಅಕ್ಟೋಬರ್ 25ರಂದು ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ 194ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ಟ್ರಕ್ ಟರ್ಮಿನಲ್‌ಗಳ ದುರಸ್ತಿ ಹಾಗೂ ನಿರ್ವಹಣೆಗೆ 10 ಕೋಟಿ ರೂ.ಗಳವರೆಗೆ ತುಂಡು ಗುತ್ತಿಗೆ ನೀಡಲು ಅನುಮೋದನಾ ನಿರ್ಣಯ ಮಾಡಲಾಗಿತ್ತು. ಅನಂತರ ಕಾಮಗಾರಿ ನಡೆಸದೆ ನಕಲಿ ದಾಖಲೆ ಸೃಷ್ಟಿಸಿ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನಿಗಮದ ಹಾಲಿ ಎಂಡಿ, ಬಳಿಕ ವಿಲ್ಸನ್ ಗಾರ್ಡನ್ ಠಾಣೆಗೆ ತುಂಡು ಗುತ್ತಿಗೆ ಕಾಮಗಾರಿಯಲ್ಲಿ 47.10 ಕೋಟಿ ಅಕ್ರಮ ನಡೆದಿದೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿತ್ತು.

LEAVE A REPLY

Please enter your comment!
Please enter your name here