ಅಧ್ಯಕ್ಷೀಯ ಚುನಾವಣಾ ಪ್ರಚಾರ – ಟ್ರಂಪ್ ಮೇಲೆ ಗುಂಡಿನ ದಾಳಿ – ಕೂದಲೆಳೆ ಅಂತರದಲ್ಲಿ ಪಾರು

ಮಂಗಳೂರು (ವಾಷಿಂಗ್ಟನ್‌): ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯಾ ಯತ್ನ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಟ್ರಂಪ್ ಪಾರಾಗಿದ್ದಾರೆ. ಜು.13ರಂದು ಪೆನ್‌ಸಿಲ್ವೇನಿಯಾದ ಬಟ್ಲರ್‌ ಎಂಬಲ್ಲಿ ಡೊನಾಲ್ಡ್‌ ಟ್ರಂಪ್ ಚುನಾವಣಾ ರ‍್ಯಾಲಿ ನಡೆಯುತ್ತಿದ್ದಾಗ ಈ ದಾಳಿ ನಡೆದಿದೆ.

ಈ ದಾಳಿಯಲ್ಲಿ ಬಂದೂಕುಧಾರಿ ಮತ್ತು ಸಭೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬ ಸಭಿಕನ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ಟ್ರಂಪ್ ಕೆನ್ನೆಗೆ ಮತ್ತು ಕಿವಿ ಬಳಿ ಗಾಯವಾಗಿದೆ.ಗುಂಡಿನ ದಾಳಿಯನ್ನು ಹತ್ಯೆ ಯತ್ನ ಎಂದು ಹೇಳಿರುವ ಕಾನೂನು ಜಾರಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬಹಿರಂಗವಾಗಿರುವ ವಿಡಿಯೋ ದೃಶ್ಯದಲ್ಲಿ ಡೊನಾಲ್ಡ್ ಟ್ರಂಪ್ ನೆಲಕ್ಕೆ ಬೀಳುವುದು ಕಂಡುಬಂದಿದೆ. ಗುಂಡಿನ ಸದ್ದು ಕೇಳಿದ ಕೂಡಲೇ ಭದ್ರತಾ ಅಧಿಕಾರಿಗಳು ಟ್ರಂಪ್ ಅವರನ್ನು ಸುತ್ತುವರಿದಿದ್ದಾರೆ. ಆದರೂ ಗುಂಡು ಟ್ರಂಪ್ ಅವರ ಮುಖ ಸವರಿಕೊಂಡು ಹೋಗಿದೆ. ಕಿವಿಯ ಬಳಿ ರಕ್ತ ಸೋರುತ್ತಿರುವುದು ಕಂಡುಬಂದಿದೆ. ಅಮೆರಿಕ ಅಧ್ಯಕ್ಷ ಜೋ ಬಿಡನ್ ಈ ದಾಳಿಯನ್ನು ಖಂಡಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಸುರಕ್ಷಿತ ಮತ್ತು ಅವರ ಆರೋಗ್ಯ ಸ್ಥಿರವಾಗಿದೆ ಎಂದು ಯುಎಸ್ ಸೀಕ್ರೆಟ್‌ ಸರ್ವೀಸ್ ಹೇಳಿದೆ.

ಕಾನೂನು ಜಾರಿ ಅಧಿಕಾರಿಗಳು ದಾಳಿಕೋರನನ್ನು ಹೊಡೆದುರುಳಿಸಿದ್ದಾರೆನ್ನಲಾಗಿದೆ. 1981ರಲ್ಲಿ ರೊನಾಲ್ಡ್ ರೇಗನ್ ಅವರ ಮೇಲೆ ಗುಂಡು ಹಾರಿಸಿದ ನಂತರ ಅಧ್ಯಕ್ಷ ಅಥವಾ ಅಧ್ಯಕ್ಷೀಯ ಅಭ್ಯರ್ಥಿಯನ್ನು ಹತ್ಯೆಗೆ ಯತ್ನಿಸಿದ ಮೊದಲ ಪ್ರಯತ್ನ ಇದು ಎಂದು ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೇವಲ ನಾಲ್ಕು ತಿಂಗಳ ಮುಂಚಿತವಾಗಿ ಈ ದಾಳಿ ನಡೆದಿದೆ.

LEAVE A REPLY

Please enter your comment!
Please enter your name here