46 ವರ್ಷಗಳ ನಂತರ ತೆರೆದುಕೊಂಡ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ -ಕೋಟ್ಯಾಂತರ ಬೆಲೆಬಾಳುವ ಚಿನ್ನ, ಬೆಳ್ಳಿ ಲಾಕರ್‌ ಗೆ ಸ್ಥಳಾಂತರ

ಮಂಗಳೂರು/ಪುರಿ (ಒಡಿಶಾ): ಇಲ್ಲಿನ ಖ್ಯಾತ ಜಗನ್ನಾಥ ದೇವಾಲಯದ ರತ್ನ ಭಂಡಾರದ ಖಜಾನೆಯನ್ನು 46 ವರ್ಷಗಳ ನಂತರ ತೆರೆಯಲಾಗಿದೆ. ಐದು ಪೆಟ್ಟಿಗೆಗಳಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಚಿನ್ನ, ಬೆಳ್ಳಿ, ಇತರ ವಸ್ತುಗಳಿರುವ ರತ್ನ ಭಂಡಾರದ ಮುಖ್ಯ ದ್ವಾರದ ಕೀಲಿ ಕೈ ಕಳೆದುಹೋದ ಹಿನ್ನಲೆಯಲ್ಲಿ ಬೀಗಗಳನ್ನು ಮುರಿದು ಬಾಗಿಲು ತೆರೆಯಲಾಗಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಜಗನ್ನಾಥ ದೇವಸ್ಥಾನದ ಮುಖ್ಯ ಆಡಳಿತಾಧಿಕಾರಿ ಅರಬಿಂದ ಪಾಧಿ ಐದು ಪೆಟ್ಟಿಗೆಗಳನ್ನು ಹೊರತರಲಾಗಿದೆ. ಅದರಲ್ಲಿನ ವಸ್ತುಗಳ ಲೆಕ್ಕಾಚಾರ ಹಾಕಿಲ್ಲ. ಸಮಯದ ಅಭಾವದ ಕಾರಣ ಅವುಗಳನ್ನು ಮುಂದೆ ಎಣಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ. ಕೀಲಿಗಳು ಕಳೆದುಹೋದ ಕಾರಣ, ಬಾಗಿಲಿನ ಬೀಗಗಳನ್ನು ಮುರಿಯಲಾಗಿದೆ. ಹಾವು ಹಿಡಿಯುವವರು ಸೇರಿದಂತೆ ನೇಮಿತ ವ್ಯಕ್ತಿಗಳು ಮಾತ್ರ ಖಜಾನೆ ಕೊಠಡಿಯನ್ನು ಪ್ರವೇಶಿಸಿದ್ದಾರೆ. ಕೆಲ ಹಾವುಗಳನ್ನು ಹಿಡಿಯಲಾಗಿದೆ ಎನ್ನಲಾಗಿದ್ದು, ರತ್ನ ಭಂಡಾರದ ಎಲ್ಲಾ ಆಭರಣಗಳನ್ನು ತಾತ್ಕಾಲಿಕ ಲಾಕರ್‌ಗಳಿಗೆ ಸ್ಥಳಾಂತರಿಸಲಾಗಿದೆ. ಒಳ ಭಾಗದಲ್ಲಿರುವ ಇನ್ನೊಂದು ಕೊಠಡಿಯಲ್ಲಿನ ಬಾಗಿಲುಗಳನ್ನು ತೆರೆದಿದ್ದರೂ, ಪೆಟ್ಟಿಗೆಗಳನ್ನು ಹೊರತರಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಒಳಗಿನ ಕೊಠಡಿಯಲ್ಲಿರುವ ಆಭರಣಗಳನ್ನು ಯಾವಾಗ ಹೊರ ತರಬೇಕೆಂದು ಸಭೆ ನಡೆಸಿ ನಿರ್ಧರಿಸುತ್ತೇವೆ. ಈಗ ಹೊರತಂದ ಆಭರಣಗಳನ್ನು ಪುರಾತತ್ವ ಇಲಾಖೆಗೆ ಹಸ್ತಾಂತರಿಸಲಾಗುವುದು. ಎಎಸ್​ಐ ರತ್ನಭಂಡಾರದ ನಿರ್ವಹಣೆಯನ್ನು ಪೂರ್ಣಗೊಳಿಸಿದ ನಂತರ, ಆಭರಣಗಳನ್ನು ತಾತ್ಕಾಲಿಕ ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗುತ್ತದೆ. ಒಳ ಕೊಠಡಿಯ ಬಗ್ಗೆ ಮುಂದೆ ಯೋಚಿಸಲಾಗುವುದು ಎಂದರು.

46 ವರ್ಷಗಳ ನಂತರ ತೆರೆಯಲಾದ ರತ್ನ ಭಂಡಾರವು ಎರಡು ಕೋಣೆಗಳನ್ನು ಹೊಂದಿದೆ. ಭೀತರ್ ಭಂಡಾರ್ ಮತ್ತು ಬಹಾರ್ ಭಂಡಾರ್ ‌ ಎಂದು ಕರೆಯಲಾಗುತ್ತಿದೆ. ಜು.14 ರಂದು ಹೊರ ಖಜಾನೆಯಲ್ಲಿನ ಪೆಟ್ಟಿಗೆಗಳನ್ನು ಮಾತ್ರ ಹೊರತರಲಾಗಿದೆ.ದಾಖಲೆಗಳ ಪ್ರಕಾರ, ದೇವಾಲಯದ ರತ್ನ ಭಂಡಾರದಲ್ಲಿ ಒಟ್ಟು 454 ಚಿನ್ನದ ವಸ್ತುಗಳಿವೆ. ಅದರ ಒಟ್ಟು ತೂಕ 128.38 ಕೆಜಿಯಾಗಿದೆ. 293 ಬೆಳ್ಳಿ ವಸ್ತುಗಳು ಇವೆ. ಇವುಗಳ ತೂಕ 22,153 ಗ್ರಾಂ, ಅಂದರೆ, 221.53 ಕೆಜಿ ಎಂದು ಹೇಳಲಾಗಿದೆ.ರತ್ನ ಭಂಡಾರವನ್ನು ಕೊನೆಯ ಬಾರಿಗೆ 14 ಜುಲೈ 1985 ರಂದು ತೆರೆಯಲಾಗಿತ್ತು. ಅಂದಿನಿಂದ ಇದು ಮುಚ್ಚಲ್ಪಟ್ಟಿದೆ. ಅದರ ಕೀಲಿಯು ಕಾಣೆಯಾಗಿದೆ ಎಂದು ಹೇಳಲಾಗಿದೆ. ಈ ಹಿಂದೆ 1905, 1926, 1978 ಮತ್ತು 1984ರಲ್ಲಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ತೆರೆಯಲಾಗಿತ್ತು. ಇದರಲ್ಲಿ 1978 ರಲ್ಲಿ ತೆರೆದು ಎಣಿಸಲಾದ ವಸ್ತುಗಳ ದಾಖಲೆಯು ಅಧಿಕೃತವಾಗಿದೆ.

LEAVE A REPLY

Please enter your comment!
Please enter your name here