ಮಂಗಳೂರು(ಪುರಿ): ಪುರಿ ಜಗನ್ನಾಥ.. ಬಂಗಾಳ ಕೊಲ್ಲಿಯ ಕಡಲತಡಿಯಲ್ಲಿ ನೆಲೆನಿಂತ ಜಗದೋದ್ಧಾರಕ.. ಪವಿತ್ರ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮಹೋದಧಿಯ ನೆಲ. ಪುರಿ ಜಗನ್ನಾಥ ದೇವಾಲಯ ಅಚ್ಚರಿಗಳ ಆಗರ. ವಿಜ್ಞಾನಕ್ಕೆ ಸೆಡ್ಡು ಹೊಡೆಯುವ ವಿಸ್ಮಯಗಳ ತಾಣ. ಪುರಿ ಜಗನ್ನಾಥ್ ದೇವಸ್ಥಾನ ದೇಶದ ಪ್ರಮುಖ ಚಾರ್ ಧಾಮ್ಗಳಲ್ಲಿ ಒಂದು. ದೇವಾಲಯದ ವಿಶೇಷತೆಯ ಬಗೆಗಿನ ವಿವರ ಇಲ್ಲಿದೆ.
- ಈ ದೇವಾಲಯದ ಮೇಲೆ ಪುರಾತನ ಕಾಲದಿಂದಲೂ ಧ್ವಜ ಹಾರಾಡುತ್ತಿದೆ. ಈ ಧ್ವಜವು ಗಾಳಿಯ ವಿರುದ್ಧ ದಿಕ್ಕಿಗೆ ಹಾರುತ್ತದೆ ಎನ್ನುವುದು ಇಲ್ಲಿನ ವಿಶೇಷ. ವೈಜ್ಞಾನಿಕವಾಗಿ ಸವಾಲನ್ನು ಒಡ್ಡುವ ಈ ಸಂಗತಿಯು, ವಿಜ್ಞಾನಕ್ಕೂ ಮಿಗಿಲಾದ ದೈವ ಶಕ್ತಿಗೆ ಸಾಕ್ಷಿಯಾಗಿದೆ.
- ದೇವಸ್ಥಾನದ ಮೇಲಿರುವ ಸುದರ್ಶನ ಚಕ್ರವು 20 ಅಡಿ ಎತ್ತರ ಮತ್ತು ಒಂದು ಟನ್ ತೂಕವನ್ನು ಹೊಂದಿದೆ. ಇದನ್ನು ದೇವಾಲಯದ ಮೇಲ್ಭಾಗದಲ್ಲಿ ಅಳವಡಿಸಲಾಗಿದೆ. ಈ ಚಕ್ರದ ವಿಶೇಷ ಏನೆಂದರೆ ಪುರಿ ನಗರದ ಯಾವುದೇ ಭಾಗದಲ್ಲಿ ನಿಂತು ನೋಡಿದರೂ ಚಕ್ರ ಕಾಣುತ್ತದೆ. ಜೊತೆಗೆ ಎಲ್ಲಿ ನಿಂತು ನೋಡಿದರೂ ಅದರ ಮುಖ ನಿಮ್ಮೆಡೆಗೆ ಇರುವಂತೆ ತೋರುತ್ತದೆ.
- ವಿಶಿಷ್ಟ ರಚನೆ ಹಾಗೂ ಶಕ್ತಿಯನ್ನು ಹೊಂದಿರುವ ಸುದರ್ಶನ ಚಕ್ರದ ಮೇಲೆ ಯಾವುದೇ ಪಕ್ಷಿಗಳು, ಕೀಟಗಳು ಹಾಗೂ ವಿಮಾನಗಳು ಹಾರುವುದಿಲ್ಲ. ಇದರಿಂದಾಗಿ ಚಕ್ರಕ್ಕೆ ದೈವ ಶಕ್ತಿಯ ಪ್ರಭಾವ ಇದೆ ಎಂದು ನಂಬಲಾಗಿದೆ. ಈ ನಿಗೂಢ ವಿದ್ಯಮಾನಗಳಿಗೆ ಕಾರಣ ಏನು ಎನ್ನುವುದನ್ನು ಇದುವರೆಗೂ ಕಂಡುಹಿಡಿಯಲಾಗಿಲ್ಲ.
- ಪುರಿ ದೇವಾಲಯದ ಇನ್ನೊಂದು ವಿಶೇಷ ಎಂದರೆ ಇಲ್ಲಿ ನೆರಳು ಬೀಳದೆ ಇರುವುದು. ದೇವಾಲಯದ ಒಳಗೆ ಮತ್ತು ಹೊರಗೆ ಯಾವುದೇ ಸಮಯದಲ್ಲಿ ನೆರಳು ಬೀಳುವುದಿಲ್ಲ. ಇದು ಪ್ರಕೃತಿಯ ಪವಾಡ ಮತ್ತು ದೈವ ಶಕ್ತಿ ಎಂಬ ನಂಬಿಕೆ ಇದೆ.
- ಈ ದೇವಾಲಯದಲ್ಲಿ ಪ್ರತಿದಿನ ಅರ್ಚಕರು ಸುಮಾರು 1000 ಅಡಿ ಎತ್ತರದಲ್ಲಿರುವ ಗೋಪುರಗಳನ್ನು ಹತ್ತಿ, ಬಾವುಟಗಳನ್ನು ಬದಲಿಸುತ್ತಾರೆ. ಈ ಆಚರಣೆಯು 1800 ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ಈ ಆಚರಣೆಯು ಅನಿರೀಕ್ಷಿತವಾಗಿ ತಪ್ಪಿದರೆ ಮುಂದಿನ 18 ವರ್ಷಗಳ ಕಾಲ ದೇವಾಲಯ ಮುಚ್ಚಲ್ಪಡುತ್ತದೆ ಎಂಬ ನಂಬಿಕೆ ಇದೆ.