ಕೇದಾರನಾಥ ದೇಗುಲದಿಂದ 228 ಕೆಜಿ ಚಿನ್ನ ನಾಪತ್ತೆ – ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿಕೆ

ಮಂಗಳೂರು/ಮುಂಬೈ: ಕೇದಾರನಾಥ ದೇವಸ್ಥಾನದಲ್ಲಿದ್ದ ಚಿನ್ನ ನಾಪತ್ತೆಯಾಗಿದೆ, 228 ಕೆಜಿ ಚಿನ್ನದ ಹಗರಣ ನಡೆದಿದೆ. ಆದರೆ ಯಾರೂ ಕೂಡಾ ತಲೆಕೆಡಿಸಿಕೊಂಡಿಲ್ಲ ಎಂದು ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.

ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಕೋರಿಕೆಯ ಮೇರೆಗೆ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಮುಂಬೈನ ‘ಮಾತೋಶ್ರೀ’ಗೆ ಭೇಟಿ ನೀಡಿದ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಹಿಂದೂ ಧರ್ಮವನ್ನು ಅನುಸರಿಸುತ್ತೇವೆ. ನಾವು ಪುಣ್ಯ ಮತ್ತು ಪಾಪವನ್ನು ನಂಬುತ್ತೇವೆ. ವಿಶ್ವಾಸಘಾತ ದೊಡ್ಡ ಪಾಪಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಉದ್ಧವ್ ಠಾಕ್ರೆಯವರಿಗೂ ಅದುವೇ ಸಂಭವಿಸಿದೆ ಎಂದು ತಿಳಿಸಿದ್ದಾರೆ. ನನಗೆ ಉದ್ಧವ್ ಠಾಕ್ರೆ ಕರೆ ಮಾಡಿದ್ದರು. ಹಾಗಾಗಿ ನಾನು ಇಲ್ಲಿಗೆ ಬಂದೆ. ನನ್ನನ್ನು ಸ್ವಾಗತಿಸಿದ ಠಾಕ್ರೆ ಅವರ ಬಳಿ ನಾನು ನಿಮಗಾದ ದ್ರೋಹದಿಂದಾಗಿ ನಮಗೆ ನೋವಾಗಿದೆ ಎಂದು ಹೇಳಿದೆ. ಅವರು ಮತ್ತೆ ಮುಖ್ಯಮಂತ್ರಿಯಾಗುವವರೆಗೂ ನಮ್ಮ ನೋವು ಹೋಗುವುದಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.

ಕೇದಾರನಾಥ ದೇವಾಲಯವನ್ನು ದೆಹಲಿಯಲ್ಲಿ ಮಾಡಲು ಸಾಧ್ಯವಿಲ್ಲ. ಹನ್ನೆರಡು ಜ್ಯೋತಿರ್ಲಿಂಗಗಳನ್ನು ವ್ಯಾಖ್ಯಾನಿಸಲಾಗಿದೆ. ಅದರ ಸ್ಥಳವನ್ನು ನಿಗದಿಪಡಿಸಲಾಗಿದೆ. ಇದು ತಪ್ಪು ಎಂದು ಹೇಳಿದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು, ಕೇದಾರನಾಥದಲ್ಲಿ 228 ಕೆಜಿ ಚಿನ್ನದ ಹಗರಣ ನಡೆದಿದೆ. ಅದರ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ನಾವು ಪ್ರಧಾನಿ ಮೋದಿಯವರ ಹಿತೈಷಿಗಳು ಎಂದ ಅವರು ಕೇದಾರನಾಥದಲ್ಲಿ ಚಿನ್ನದ ಹಗರಣ ನಡೆದಿದೆ. ಆ ವಿಚಾರದಲ್ಲಿ ಯಾರೂ ಯಾಕೆ ಚಕಾರ ಎತ್ತುತ್ತಿಲ್ಲ? ಕೇದಾರನಾಥದಲ್ಲಿ ಹಗರಣ ಮಾಡಿ ಈಗ ದೆಹಲಿಯಲ್ಲಿ ಕೇದಾರನಾಥ ನಿರ್ಮಾಣವಾಗಲಿದೆಯೇ? ನಂತರ ಮತ್ತೊಂದು ಹಗರಣ ನಡೆಯಲಿದೆ. ಕೇದಾರನಾಥದಲ್ಲಿ ಚಿನ್ನ ನಾಪತ್ತೆಯಾದ ಬಗ್ಗೆ ತನಿಖೆಯಿಲ್ಲ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here