ಮಂಗಳೂರು/ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಕುಂಜೆ ಗ್ರಾಮದ ನೀರಲ್ಕೆ ಎಂಬಲ್ಲಿ ಮನೆಯೊಂದರಿಂದ ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಯನ್ನು ಮುಲ್ಕಿ ಪೊಲೀಸರು ದಸ್ತಗಿರಿ ಮಾಡಿ ಕಳ್ಳತನ ಮಾಡಿದ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಆರೋಪಿಯನ್ನು ಚಿಕ್ಕಮಗಳೂರು ಜಿಲ್ಲೆ ಇಂದಾವರ ಉಪ್ಪಳ್ಳಿ ಮಸೀದಿ ಬಳಿಯ ನಿವಾಸಿ ಅಬೂಬಕರ್ ಯಾನೆ ಇತ್ತೆ ಬರ್ಪೆ ಅಬೂಬಕ್ಕರ್(69) ಎಂದು ಗುರುತಿಸಲಾಗಿದೆ. ಜು. 3ರಂದು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಕುಂಜೆ ಗ್ರಾಮದ ನೀರಲ್ಕೆ ಎಂಬಲ್ಲಿ ಸ್ಥಳೀಯ ನಿವಾಸಿ ಸಾಗೀರ ಎಂಬವರ ಮನೆಯ ಹಿಂಭಾಗಿಲಿನ ಚಿಲಕ ಮುರಿದು ಮನೆಯ ಕಪಾಟಿನ ಒಳಗಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ ಚಿನ್ನಾಭರಣಗಳನ್ನು ಕಳವು ಮಾಡಿದ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಲ್ಕಿ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ವಿದ್ಯಾಧರ್ ಹಾಗೂ ಎಸ್‌ಐ ವಿನಾಯಕ್ ಬಾವಿಕಟ್ಟೆ ತೀವ್ರ ತನಿಖೆ ನಡೆಸಿ ಜು. 20ರಂದು ಆರೋಪಿ ಅಬೂಬಕ್ಕರ್ ನನ್ನು ದಸ್ತಗಿರಿ ಮಾಡಿದ್ದು ಆರೋಪಿಯಿಂದ ಕೃತ್ಯಕ್ಕೆ ಉಪಯೋಗಿಸಿದ ಟಿವಿಎಸ್ ಜುಪಿಟರ್ ಸ್ಕೂಟರ್ ಮತ್ತು ಬ್ರಾಸ್ಲೇಟ್, ಮೂರು ಉಂಗುರ, ಮುತ್ತಿನ ಸರ, ಕಿವಿಯೋಲೆ ಸೇರಿದಂತೆ ಒಟ್ಟು 16 ಗ್ರಾಂ ಚಿನ್ನಾಭರಣಗಳನ್ನು ಮತ್ತು ಸ್ಕ್ರೂಡ್ರೈವರ್, ಕಬ್ಬಿಣದ ರಾಡ್, ಟಾರ್ಚ್ ಲೈಟ್ ವಶಪಡಿಸಿಕೊಳ್ಳಲಾಗಿದೆ.