ಮಂಗಳೂರು: ಮಂಗಳೂರಿನಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಭಾರೀ ಅವಾಂತರವನ್ನೇ ಸೃಷ್ಠಿಸಿದೆ. ಈ ನಡುವೆ ಅಂಡರ್ ಪಾಸ್ ನಲ್ಲಿ ತುಂಬಿದ್ದ ನೀರಿನಲ್ಲಿ ಕೆಎಸ್ಆರ್ ಟಿಸಿ ಬಸ್ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.
ಮಂಗಳೂರಿನಲ್ಲಿ ನಿನ್ನೆ ಸಂಜೆಯಿಂದಲೇ ಎಡೆಬಿಡದೆ ಮಳೆಯಾಗುತ್ತಿದ್ದು, ಮಳೆ ಅಬ್ಬರಕ್ಕೆ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿದೆ.
ಈ ನಡುವೆ ಮಂಗಳೂರಿನ ಪಡೀಲ್ ರೈಲ್ವೇ ಅಂಡರ್ ಪಾಸ್ ನಲ್ಲಿ ನೀರು ನಿಂತಿದ್ದು ಈ ನೀರಿನಲ್ಲಿ ಕೆಎಸ್ಆರ್ ಟಿಸಿ ಬಸ್ಸೊಂದು ಸಿಕ್ಕಿಹಾಕಿಕೊಂಡಿದೆ. ನೀರು ನಿಂತಿದ್ದರೂ ಬಸ್ ಚಾಲಕ ನೀರಿನಲ್ಲೇ ಬಸ್ ನ್ನು ಓಡಿಸಿದ್ದಾನೆ. ಈ ವೇಳೆ ಬಸ್ಸಿನೊಳಗೆ ನೀರು ನುಗ್ಗಿ ತಾಂತ್ರಿಕ ದೋಷದಿಂದ ಅಂಡರ್ ಪಾಸ್ ನಲ್ಲಿ ಬಸ್ ಬಾಕಿಯಾಗಿದೆ. ಬಸ್ ನೊಳಗಿದ್ದ ಪ್ರಯಾಣಿಕರು ಕೆಳಗಿಳಿಯಲಾಗದೆ ಬಸ್ ನಲ್ಲೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇನ್ನೊಂದೆಡೆ ಮಂಗಳೂರಿನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕ ರಸ್ತೆ ಹೊಳೆಯಂತಾಗಿದೆ. ನಗರದಲ್ಲಿ ಸುರಿದ ಭಾರಿ ಮಳೆಗೆ ಹಲವೆಡೆ ರಸ್ತೆಗಳು ಜಲಾವೃತವಾಗಿದೆ. ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿದೆ.ವಾಹನ ಸವಾರರು ಸಂಚಾರ ನಡೆಸಲು ಪರದಾಡುವಂತಾಗಿದೆ.