ಮಂಗಳೂರು (ಸೇಲಂ): ತಮಿಳುನಾಡಿನ ಸೇಲಂನಲ್ಲಿ ವ್ಯಕ್ತಿಯೊಬ್ಬರು ಅನ್ಯಲೋಕದ ದೇವರಿಗಾಗಿ ದೇವಾಲಯವನ್ನು ನಿರ್ಮಿಸಿದ್ದಾರೆ. ಅನ್ಯಲೋಕದ ಆ ದೇವ ಭೂಲೋಕದ ತನ್ನ ಭಕ್ತರನ್ನು ನೈಸರ್ಗಿಕ ವಿಕೋಪಗಳಿಂದ ರಕ್ಷಿಸುವ ಶಕ್ತಿ ಹೊಂದಿದ್ದಾರೆ ಎನ್ನುತ್ತಾರೆ ದೇವಸ್ಥಾನ ನಿರ್ಮಿಸಿದ ಲೋಗನಾಥನ್.
ಸೇಲಂನ ಮಲ್ಲಮೂಪಂಬಟ್ಟಿಯ ಲೋಗನಾಥನ್ ಅವರು ಸುಮಾರು ಮುಕ್ಕಾಲು ಎಕರೆ ಭೂಮಿಯಲ್ಲಿ ಹರಡಿರುವ ಅನ್ಯಗ್ರಹ ದೇವರನ್ನು ಪ್ರತಿಷ್ಠಾಪಿಸಿದ್ದಾರೆ. ನಾನು ಅನ್ಯಗ್ರಹ ಜೀವಿಗಳೊಂದಿಗೆ ಮಾತನಾಡಿದ್ದೇನೆ ಮತ್ತು ದೇವಾಲಯವನ್ನು ನಿರ್ಮಿಸಲು ಅವರಿಂದ ಅನುಮತಿ ಸಹ ಪಡೆದಿದ್ದೇನೆ ಎಂದು ಅವರು ಹೇಳುತ್ತಾರೆ. ಪರಕೀಯ ದೇವರು ಅಲ್ಲದೆ ಶಿವ, ಪಾರ್ವತಿ, ಮುರುಗನ್, ಕಾಳಿ ಮುಂತಾದ ದೇವ-ದೇವತೆಗಳ ವಿಗ್ರಹಗಳನ್ನು ಸಹ ನೆಲದಿಂದ 11 ಅಡಿ ಕೆಳಗಿರುವ ನೆಲಮಾಳಿಗೆಯಲ್ಲಿ ಸ್ಥಾಪಿಸಲಾಗಿದೆ.
ಜಗತ್ತಿನಲ್ಲಿ ನೈಸರ್ಗಿಕ ವಿಕೋಪಗಳು ಹೆಚ್ಚುತ್ತಿರುವಾಗ, ಅವುಗಳನ್ನು ತಡೆಯುವ ಶಕ್ತಿ ಅನ್ಯಗ್ರಹ ಜೀವಿಗಳಿಗೆ ಇದೆ ಎಂಬುವುದು ಲೋಗನಾಥನ್ ನಂಬಿಕೆ. ಅವರ ನಂಬಿಕೆಯ ಪ್ರಕಾರ, ಏಲಿಯನ್‌ಗಳು ಚಲನಚಿತ್ರಗಳಲ್ಲಿ ಚಿತ್ರಿಸುವಂತಹವರಲ್ಲ. ಬಾಳೆ ಎಲೆಯನ್ನು ದೇಹಕ್ಕೆ ಸುತ್ತಿಕೊಂಡರೆ ಅನ್ಯಗ್ರಹ ಜೀವಿಗಳ ವಿಕಿರಣದಿಂದ ಪಾರಾಗಬಹುದು ಎಂಬ ಹೇಳಿಕೆಯನ್ನೂ ಲೋಗನಾಥನ್ ನೀಡಿದ್ದಾರೆ.
ಲೋಕನಾಥನ್ ಅವರು ಅನ್ಯಗ್ರಹ ಜೀವಿಗಳಿಗಾಗಿ ನಿರ್ಮಿಸಿರುವ ದೇಗುಲದ ನಿರ್ಮಾಣ ಕಾರ್ಯ ಇನ್ನೂ ನಡೆಯುತ್ತಿದ್ದು, ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿರುವುದರಿಂದ ಇಲ್ಲಿನ ವಿಶಿಷ್ಟ ದೇವಾಲಯದ ಕುರಿತು ಚರ್ಚೆ ನಡೆದಿದೆ.