ಇಂದಿನಿಂದ ಬಿಜೆಪಿ-ಜೆಡಿಎಸ್‌ ಮೈಸೂರ್‌ ಚಲೋ ಪಾದಯಾತ್ರೆ – ಜಿಲ್ಲೆಯಿಂದ 5 ಸಾವಿರ ಕಾರ್ಯಕರ್ತರು: ಸತೀಶ್ ಕುಂಪಲ

ಮಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ–ಜೆಡಿಎಸ್‌ನಿಂದ ಹಮ್ಮಿಕೊಂಡಿರುವ ಬೆಂಗಳೂರಿನಿಂದ ಮೈಸೂರು ವರೆಗಿನ ಪಾದಯಾತ್ರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಸಮರ ಸಾರಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಬಗ್ಗೆ ಸಿಬಿಐ ತನಿಖೆಯೇ ನಡೆಯಬೇಕು. ಇದೂ ಸೇರಿದಂತೆ ರಾಜ್ಯ ಸರ್ಕಾರದ ಎಲ್ಲ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ವರೆಗೂ ಹೋರಾಟ ನಡೆಸಲಾಗುವುದು ಎಂದು ಹೇಳಿರುವ ಅವರು ದಕ್ಷಿಣ ಕನ್ನಡ ಜಿಲ್ಲೆಯಿಂದ 5 ಸಾವಿರ ಕಾರ್ಯಕರ್ತರು ಯುವಮೋರ್ಚಾ ನೇತೃತ್ವದಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜತೆಗೆ ಇತರ ಮೋರ್ಚಾಗಳೂ ಈ ಪಾದಯಾತ್ರೆಗೆ ಸಹಯೋಗ ನೀಡಲಿವೆ. 200ಕ್ಕೂ ಹೆಚ್ಚು ಕಾರ್ಯಕರ್ತರ ಒಂದು ತಂಡ ಈಗಾಗಲೇ ಅಲ್ಲಿಗೆ ಹೊರಟಿದೆ ಎಂದು ಸತೀಶ್ ಕುಂಪಲ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಿಂದ ಜಿಲ್ಲಾ ಘಟಕದ ಅಧ್ಯಕ್ಷರು, ಜನಪ್ರತಿನಿಧಿಗಳು ಸೇರಿದಂತೆ ಎಲ್ಲ ಪ್ರಮುಖರು ಶನಿವಾರ ಬೆಂಗಳೂರಿಗೆ ತೆರಳಿ ಪಾದಯಾತ್ರೆಯಲ್ಲಿ ಸೇರಿಕೊಳ್ಳಲಿದ್ದಾರೆ. ಆ.7ನೇ ತಾರೀಖಿನಂದು 2-3 ಸಾವಿರ ಕಾರ್ಯಕರ್ತರು ಒಟ್ಟಿಗೇ ಇಲ್ಲಿಂದ ಹೊರಟು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವರು ಎಂದು ಸತೀಶ್‌ ಕುಂಪಲ ಹೇಳಿದ್ದಾರೆ. ಈ ಸಂದರ್ಭದಲ್ಲಿ ಯತೀಶ್ ಅರ್ವಾರ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಸಂಜಯ್ ಪ್ರಭು, ಮಹೇಶ್ ಜೋಗಿ ಸುದ್ದಿಗೋಷ್ಠಿಯಲ್ಲಿದ್ದರು.

LEAVE A REPLY

Please enter your comment!
Please enter your name here