



ಮಂಗಳೂರು (ರಾಮನಗರ): ಬಿಜೆಪಿ-ಜೆಡಿಎಸ್ ಪಾದಯಾತ್ರೆ ವಿರುದ್ಧ ರಾಮನಗರದಲ್ಲಿ ಆ.3ರಂದು ನಡೆದ ಜನಾಂದೋಲನ ಸಭೆ ನಡೆಯಿತು. ಈ ಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಅವರಿಗೆ ಮುಡಾ ನಿವೇಶನ ಕೊಟ್ಟಾಗ ಸಿಎಂ ಆಗಿದ್ದವರು ಯಾರು? ಆಗ ಕೊಟ್ಟಾಗ ಹಗರಣ ಅನಿಸಲಿಲ್ಲವೇ? ಈಗ ಈ ವಿಚಾರ ಎತ್ತುತ್ತಿದ್ದೀರಲ್ಲ? ಸಿದ್ದರಾಮಯ್ಯ ಅವರ ಪತ್ನಿಗೆ ಅವರ ಸಹೋದರ ಅರಿಶಿನ ಕುಂಕುಮಕ್ಕೆ ದಾನವಾಗಿ ನೀಡಿದ ಜಮೀನಿನ ವಿಚಾರದಲ್ಲಿ ಅಕ್ರಮ ನಡೆದಿದೆಯಾ? ಅವರು ಸರ್ಕಾರಿ ಜಮೀನು ಕಬಳಿಸಿದ್ದಾರಾ? ಅಕ್ರಮವಾಗಿ ಜಮೀನು ಮಂಜೂರಾತಿ ಮಾಡಿಕೊಂಡಿದ್ದಾರಾ? ಅವರ ಜಮೀನನ್ನು ಮುಡಾದವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಕಾರಣಕ್ಕೆ ಪರಿಹಾರವಾಗಿ ನಿವೇಶನ ಪಡೆದುಕೊಂಡಿದ್ದಾರೆ. ಅದರಲ್ಲಿ ತಪ್ಪೇನಿದೆ? ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವಾಗ್ಧಾಳಿ ನಡೆಸಿದ್ದಾರೆ.



ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ, ಬೊಮ್ಮಾಯಿ ಅವರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನಿವೇಶನ ನೀಡಿದ್ದೀರಿ. ಈ ನಿವೇಶನಗಳನ್ನು ಈಗ ಸಚಿವರಾಗಿರುವ ಭೈರತಿ ಸುರೇಶ್ ಕೊಟ್ಟಿದ್ದಾರಾ? ಸಿದ್ದರಾಮಯ್ಯ ಈ ನಿವೇಶನ ನೀಡಲು ಸಹಿ ಹಾಕಿದ್ದಾರಾ? ಬಿಜೆಪಿ ಅಧಿಕಾರದಲ್ಲಿದ್ದಾಗ, ಬಿಜೆಪಿಯವರು ಮುಡಾದಲ್ಲಿ ಅಧಿಕಾರ ಹೊಂದಿದ್ದಾಗ ಈ ನಿವೇಶನ ಹಂಚಿಕೆ ಮಾಡಲಾಗಿದೆ. ಮುಡಾದವರು ತಮ್ಮ ತಪ್ಪಿಗೆ ಪರಿಹಾರವಾಗಿ ಸಿದ್ದರಾಮಯ್ಯ ಅವರ ಪತ್ನಿಗೆ ನಿವೇಶನ ನೀಡಿದ್ದಾರೆ ಎಂದ ಅವರು, ಈ ವಿಚಾರ ಚರ್ಚೆ ಮಾಡುವ ಮುನ್ನ ನೀವು ಜೆಡಿಎಸ್ ನಾಯಕರ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಚರ್ಚೆ ಮಾಡಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.















