ಮಂಗಳೂರು: ಸುರತ್ಕಲ್ ಮುಕ್ಕ ಭಾಗದಲ್ಲಿ ಹಳೇಯ ಟೋಲ್‌ಗೇಟ್ ಬಳಿಯ ಸರ್ವಿಸ್ ರಸ್ತೆಯಲ್ಲಿ ಮೃತ ಕುರಿಗಳ ದೇಹಗಳನ್ನು ರಸ್ತೆ ಬದಿ ಎಸೆದು ಪರಾರಿಯಾಗಿದ್ದಾರೆ. ನಗರಪಾಲಿಕೆಯ ಕಾರ್ಮಿಕರ ಸಹಾಯದಿಂದ ಇವುಗಳನ್ನು ಬೇರೆಡೆ ಸ್ಥಳಾಂತರಿಸಿ ಮಣ್ಣು ಮಾಡುವ ಮೂಲಕ ಪರಿಸರ ಹಾಗೂ ಜನರ ಆರೋಗ್ಯ ಉಳಿಸುವ ಕೆಲಸ ಮಾಡಲಾಗಿದೆ.
ಈ ಹಿಂದೆ ವಧೆ ಮಾಡಿದ ಪ್ರಾಣಿಗಳ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಬಿಸಾಡಿ ಹೋಗುತ್ತಿದ್ದರು.ಈಗ ಸತ್ತ ಪ್ರಾಣಿಗಳನ್ನೇ ರಸ್ತೆ ಬದಿಯಲ್ಲಿ ಬಿಸಾಡಿ ಹೋಗುವಂತಹ ಮನಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ವ್ಯಾಪಕವಾಗಿ ಹರಡುತ್ತಿರುವ ರೋಗಗಳಿಗೆ ಇದು ಕಾರಣವಾಗಬಹುದು ಎಂಬುದನ್ನು ಇವರು ಮರೆತಿದ್ದಾರೆ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಈ ಬಗ್ಗೆ ತನಿಖೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇಂಥ ಕೃತ್ಯ ಮಾಡುವ ಕಿಡಿಗೇಡಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಾರ್ವಜನಿಕರಿಂದ ಸಾಕ್ಷಿ ಸಮೇತ ದೂರು ಸ್ವೀಕರಿಸಲು ಸೂಕ್ತ ಡಿಜಿಟಲ್ ವ್ಯವಸ್ಥೆ ಮಾಡಬೇಕು ಎಂದು 2 ನೇ ವಾರ್ಡ್ ನ ಕಾರ್ಪೋರೇಟರ್ ಶ್ವೇತಾ ಪೂಜಾರಿ ಹೇಳಿದ್ದಾರೆ. ಉತ್ತರ ಕರ್ನಾಟಕ ಕಡೆಯಿಂದ ಕುರಿಸಾಗಾಟ ವಾಹನಗಳಲ್ಲಿ ಮಂಗಳೂರಿಗೆ ಕುರಿ ಮಾರಾಟ ಮಾಡುವ ವ್ಯಾಪಾರಿಗಳು ಸಾಗಾಟದ ವೇಳೆ ಮೃತ ಪಟ್ಟ ಕುರಿಗಳನ್ನು ವಾಪಾಸು ಹೋಗುವ ವೇಳೆಗೆ ರಸ್ತೆ ಪಕ್ಕದಲ್ಲಿ ಪೊದೆಗಳಲ್ಲಿ ಎಸೆದು ಹೋಗಿರುವ ಬಗ್ಗೆ ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.