ಆಟಿದ ಗೇನ: ತುಳು ಅಕಾಡೆಮಿಯಲ್ಲಿ ಹೊಸ ಚಿಂತನೆಯ ಆಟಿ ಕೂಟ

ಮಂಗಳೂರು: ಆಟಿಯ ಗಮ್ಮತ್ತ್, ಸಂಭ್ರಮ ಮೊದಲಾದ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ ಆಟಿಯ ಬಗ್ಗೆ ನೈಜ ಚಿತ್ರಣ ನೀಡುವ ‘ಆಟಿದ ಗೇನ’ ಕಾರ್ಯಕ್ರಮ ಭಾನುವಾರ ಮಂಗಳೂರಿನ ತುಳು ಭವನದಲ್ಲಿ ನಡೆಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಆಟಿಯ ಹಿನ್ನೆಲೆಯಲ್ಲಿ ಚಿತ್ರ ರಚನಾ ಸ್ಪರ್ಧೆ ಹಾಗೂ ವಿಚಾರ ಮಂಥನ ಕೂಟ ನಡೆಯಿತು.

ಹಿರಿಯರು ಹೇಳಿದ ಆಟಿಯ ಮಾಹಿತಿಯ ಬಗ್ಗೆ ಹಾಗೂ ಆಟಿ ತಿಂಗಳಲ್ಲಿ ತುಳುನಾಡಿನ ಪರಿಸರದಲ್ಲಿ ಕಾಣಸಿಗುವ ಪ್ರಕೃತಿ ವೈಶಿಷ್ಟ್ಯಗಳ ಬಗ್ಗೆ ವಿದ್ಯಾರ್ಥಿಗಳು ಚಿತ್ರ ರಚನೆ ಮಾಡಿದರು. ವಿಚಾರ ಮಂಥನ ಕಾರ್ಯಕ್ರಮವನ್ನು ಜಿಲ್ಲಾ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಷಾ ಉದ್ಘಾಟಿಸಿ ಮಾತನಾಡಿ, ತುಳು ಅಕಾಡೆಮಿಯು ‘ಆಟಿ ಗೇನ’ದ ವಿಶಿಷ್ಟ ಕಾರ್ಯಕ್ರಮದ ಮೂಲಕ ಹಿಂದಿನ ಕಾಲದ ಆಟಿ ತಿಂಗಳನ್ನು ಪರಿಚಯಿಸುವ ಕಾರ್ಯ ಹಮ್ಮಿಕೊಂಡಿರುವುದು ಸ್ತುತ್ಯಾರ್ಹವಾದುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಹಿರಿಯ ತುಳು ಸಂಶೋಧಕಿ ಡಾ.ಇಂದಿರಾ ಹೆಗ್ಡೆ ಉಪನ್ಯಾಸ ನೀಡಿ, ಹಿಂದಿನ ಕಾಲದಲ್ಲಿ ಆಟಿ ಅಂದರೆ ಅನಿಷ್ಟ ತಿಂಗಳು ಎಂಬ ಭಯ ಇತ್ತು . ವೃತ್ತಿ ಬದುಕಿಗೆ ಭಾರೀ ಸಂಕಷ್ಟವಿದ್ದ ಆ ಕಾಲದ ಜನರಿಗೆ ಅಂದಿನ ಆಟಿ ತಿಂಗಳು ಅನಿಷ್ಠವಾಗಿ ಕಂಡಿರಬಹುದು. ಇವತ್ತು ಆಟಿ ಕಾರ್ಯಕ್ರಗಳ ಮೂಲಕ ಗೌಜಿ, ಆಡಂಬರದ ಕಾರ್ಯಗಳಿಗೆ ಒತ್ತು ನೀಡುತ್ತಿದ್ದೇವೆ. ಇದು ಬಾರೀ ಜಿಜ್ಞಾಸೆಯ ವಿಚಾರ ಎಂದು ಹೇಳಿದರು. ಯಾವುದೇ ಹಬ್ಬ, ಆರಾಧನೆಗಳು ನಡೆಯದಿದ್ದ ಆಟಿ ತಿಂಗಳಲ್ಲಿ ಈಚೆಗೆ ನೂರು ವರ್ಷಗಳಿಂದ ವೈದಿಕ ಪ್ರಭಾವದ ಕಾರಣವಾಗಿ ಆಟಿ ತಿಂಗಳಲ್ಲಿ ನಾಗರ ಪಂಚಮಿ ಆಚರಣೆಗೆ ಬಂತು. ಹಿಂದಿನ ಕಾಲದಲ್ಲಿ ಭೂಮಿ ತಂಪಾಗಿದ್ದ ಮಳೆಗಾಲದಲ್ಲಿ ನಾಗನಿಗೆ ತನು ಅರ್ಪಿಸುವ ಸಂಪ್ರದಾಯ ಇರಲಿಲ್ಲ, ಬದಲಿಗೆ ಆಟಿ ಅಮಾವಾಸ್ಯೆ ದಿನ ನಾಗ ಬನದಲ್ಲಿ ಗಿಡಗಂಟಿಗಳನ್ನು ಕತ್ತರಿಸಿ ಸ್ವಚ್ಚಗೊಳಿಸುವ ಕೆಲಸ ಮಾಡುತ್ತಿದ್ದರು ಎಂಬುದನ್ನು ಇಂದಿರಾ ಹೆಗ್ಡೆ ನೆನಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ, ಅಕಾಡೆಮಿಯು ತುಳುನಾಡಿನ ವಿವಿಧ ಮೂಲ ಸಮುದಾಯಗಳ ಸಾಂಸ್ಕೃತಿಕ ಆಯಾಮ, ಆಚಾರ, ವಿಚಾರ, ಸಂಪ್ರದಾಯಗಳ ಬಗ್ಗೆ ದಾಖಲೀಕರಣ ಮಾಡುವ ಉದ್ದೇಶವಿರಿಸಿಕೊಂಡಿದೆ. ಆಟಿ ತಿಂಗಳಲ್ಲಿ ನಡೆಯುವ ಭೂತಾರಾಧನೆಯ ಬಗ್ಗೆ ಕೂಡ ಅಧ್ಯಯನ, ದಾಖಲೀಕರಣ ಮಾಡಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಕೃಷಿ ಕಸುಬಿನ ಮಹಿಳೆಯರಾದ ಲೀಲಾ, ಸುರ್ಯೆದಿ, ಮೋಹಿನಿ, ಇಂದಿರಾ ಅವರನ್ನು ಸನ್ಮಾನಿಸಲಾಯಿತು.
ತುಳು ಅಕಾಡೆಮಿ ಸದಸ್ಯ ರೋಹಿತ್ ಉಳ್ಳಾಲ್ , ಮುಂಡಾಲ ಯುವ ವೇದಿಕೆಯ ಅಧ್ಯಕ್ಷ ರವಿ ಕುದ್ಮುಲ್ ಗಾರ್ಡನ್ ಶುಭಕೋರಿ ಮಾತನಾಡಿದರು.
ವೇದಿಕೆಯಲ್ಲಿ ಶ್ವಾಸಕೋಶ ತಜ್ಞೆ ಡಾ.ಅಲ್ಕಾ ಸಿ.ಭಟ್, ಲತಾ ಎಸ್.ಬಿ.‌, ಚಂದ್ರ ಪ್ರಭಾ ಶೇಖರ್, ಅನಿತಾ ದಯಾಕರ್, ರತ್ನಾವತಿ ರಂಜನ್, ಚೈತ್ರ ಮುಲ್ಲಕಾಡ್ ಉಪಸ್ಥಿತರಿದ್ದರು. ಕಲಾವಿದರಾದ ಬಿ.ಪಿ.ಮೋಹನ್ ಕುಮಾರ್ , ನೇಮಿರಾಜ್ ಶೆಟ್ಟಿ, ಹರೀಶ್ ಕೊಡಿಯಾಲಬೈಲ್ ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು. ಸುಪ್ರಿತಾ ಪ್ರಸಾದ್ ಸ್ವಾಗತಿಸಿದರು. ಸುಮಾ ಯಾದವ್ ಕಾರ್ಯಕ್ರಮ ನಿರ್ವಹಿಸಿದರು. ಶ್ರದ್ಧಾ ಎಸ್ ವಂದಿಸಿದರು.

LEAVE A REPLY

Please enter your comment!
Please enter your name here