ಮಂಗಳೂರು(ಬೆಂಗಳೂರು): ಕರ್ನಾಟಕದಲ್ಲಿ ಕನಿಷ್ಠ 62 ಸೇತುವೆಗಳಿಗೆ ಬಲವರ್ಧನೆಯ ಅಗತ್ಯವಿರುವ ಬಗ್ಗೆ, ಎರಡು ವರ್ಷಗಳ ಹಿಂದೆ ಯೋಜನೆ ಮತ್ತು ರಸ್ತೆ ಆಸ್ತಿ ನಿರ್ವಹಣಾ ಕೇಂದ್ರ ವರದಿ ನೀಡಿದ್ದರೂ ಸರ್ಕಾರವು ಪುನಶ್ಚೇತನ ಕಾಮಗಾರಿಗೆ ಅನುಮೋದನೆ ನೀಡಿಲ್ಲ ಎಂದು ತಿಳಿದು ಬಂದಿದೆ.
2022 ರಲ್ಲಿ ಸುಮಾರು 56 ಸೇತುವೆಗಳನ್ನು ಮರು ಬಲಪಡಿಸುವ ಅಗತ್ಯವಿದೆ ಎಂದು ಪಿಆರ್‌ಎಎಂಸಿ ವರದಿ ನೀಡಿತ್ತು. ಇನ್ನು ಕೆಲವು ಸೇತುವೆಗಳನ್ನು ನಿರ್ವಹಣಾ ಕೇಂದ್ರ 2020ರ ಆರಂಭದಲ್ಲಿ ಗುರುತಿಸಿತ್ತು. ಪಿಆರ್‌ಎಎಂಸಿ ಸಂಸ್ಥೆ ಮಣ್ಣಿನ ಅಧ್ಯಯನವನ್ನು ನಡೆಸಿ ವಿವರವಾದ ಕಾರ್ಯಸಾಧ್ಯತೆಯ ವರದಿಯನ್ನು ಕಳುಹಿಸಿದೆ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಸಂಸ್ಥೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಪಿಆರ್‌ಎಎಂಸಿ ವರದಿಯ ಆಧಾರದ ಮೇಲೆ, ಮಣ್ಣಿನ ಪರೀಕ್ಷೆ ಮತ್ತು ಸಂಚಾರ ಸಾಂದ್ರತೆಯ ವಿಶ್ಲೇಷಣೆಯನ್ನು ನಡೆಸಿದ್ದೇವೆ. ಸೇತುವೆಯ ಸ್ಥಿತಿಯ ಆಧಾರದ ಮೇಲೆ ವಿವಿಧ ಸೇತುವೆಗಳಿಗೆ ವಿಭಿನ್ನವಾದ ದುರಸ್ತಿಯ ಬಗ್ಗೆ ವರದಿಯಲ್ಲಿ ಸೂಚಿನೆ ನೀಡಲಾಗಿದೆ. ಇದರೊಂದಿಗೆ ನೂತನ ವಾಹನ ಮಾರ್ಗಗಳ ಸೇರ್ಪಡೆಯಿಂದ ಸಣ್ಣ ಬಲವರ್ಧನೆ ಕೆಲಸಗಳವರೆಗೆ ಹಲವಾರು ತಾಂತ್ರಿಕ ದುರಸ್ತಿಗಳನ್ನು ಸೂಚಿಸಲಾಗಿದೆ ಎಂದು ಕೆಆರ್‌ಡಿಸಿಎಲ್ ಅಧಿಕಾರಿ ಮಾಹಿತಿ ನೀಡಿದ್ದಾರೆನ್ನಲಾಗಿದೆ.
ಪಿಆರ್‌ಎಎಂಸಿ ರಾಜ್ಯಾದ್ಯಂತ ಸೇತುವೆಗಳ ಸಾಮರ್ಥ್ಯ ಮತ್ತು ಸ್ಥಿರತೆಯನ್ನು ವಿಶ್ಲೇಷಿಸಲು ನಿಯಮಿತ ತಪಾಸಣೆ ನಡೆಸುತ್ತದೆ. ಸೇತುವೆಯ ಬಲವನ್ನು ನಿರ್ಧರಿಸಲು ಸೇತುವೆ ತಪಾಸಣೆ ವಾಹನಗಳನ್ನು ಮೀಸಲಿಟ್ಟಿದ್ದೇವೆ. ಸೇತುವೆಗಳ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ತೆಗೆದುಕೊಂಡಿದ್ದು ಶಕ್ತಿಯನ್ನು ನಿರ್ಧರಿಸಲು ವಿವಿಧ ಪರೀಕ್ಷೆಗಳನ್ನು ನಡೆಸಿದ್ದೇವೆ ಎಂದು ಪಿಆರ್‌ಎಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎನ್ನಲಾಗಿದೆ.
ಜಿಲ್ಲೆಗಳ ನಡುವಿನ ಸಂಪರ್ಕವನ್ನು ಖಾತ್ರಿಪಡಿಸುವಲ್ಲಿ ಈ ಸೇತುವೆಗಳು ನಿರ್ಣಾಯಕವಾಗಿದ್ದರೂ ಪ್ರಯಾಣಿಕರಿಗೆ ಅಪಾಯವನ್ನುಂಟು ಮಾಡುವ ಹಲವು ಸೇತುವೆಗಳಿವೆ. ತುಂಗಾ ನದಿಗೆ ಅಡ್ಡಲಾಗಿ ಮತ್ತು ತೀರ್ಥಹಳ್ಳಿಯ ಶರಾವತಿ ಮತ್ತು ಹಿರೇಕೆರೂರಿನ ಕುಮುದಾವತಿ ನದಿಯ ಹಿನ್ನೀರಿನ ಮೇಲೆ ನಿರ್ಮಿಸಲಾದ ಸೇತುವೆ ಸೇರಿದಂತೆ ಅನೇಕ ಸೇತುವೆಗಳು ರಾಜ್ಯದ ಕರಾವಳಿ ಮತ್ತು ಉತ್ತರ ಭಾಗದಲ್ಲಿ ಹರಡಿಕೊಂಡಿವೆ.ಇವುಗಳ ಪೈಕಿ ಹಲವು ಸೇತುವೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿವೆ.ಕೆಲವು ಸೇತುವೆಗಳು ಗಂಭೀರ ಸ್ಥಿತಿಯಲ್ಲಿವೆ ಮತ್ತು ತಕ್ಷಣದ ಗಮನದ ಅಗತ್ಯವಿದೆ. ಅವುಗಳಲ್ಲಿ ಕೆಲವು ಸ್ವಲ್ಪ ಸಮಯದವರೆಗೆ ಸಂಚಾರ ದಟ್ಟಣೆಯನ್ನು ತಡೆದುಕೊಳ್ಳಬಹುದು. ತಕ್ಷಣದ ದುರಸ್ತಿ ಸಾಧ್ಯವಾಗದಿದ್ದರೆ, ಸಂಚಾರವನ್ನು ಪರ್ಯಾಯ ರಸ್ತೆಗಳಿಗೆ ತಿರುಗಿಸಬೇಕು ಎಂದು ಪಿಆರ್‌ಎಎಂಸಿ ಮೂಲಗಳು ತಿಳಿಸಿವೆ.