ಕೋಲಾರ (ಮಂಗಳೂರು): ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಫಲಿತಾಂಶದ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಕೇಳಿರುವ ದಾಖಲೆ ಸಲ್ಲಿಸಲು ಆ.13ರಂದು ಇವಿಎಂ ಉಗ್ರಾಣದ ಬಾಗಿಲು ತೆರೆಯಲು ಕೋಲಾರ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಕೋಲಾರ ಜಿಲ್ಲಾಧಿಕಾರಿ ಕಚೇರಿಯ ಸಂಕೀರ್ಣದಲ್ಲಿರುವ ಇವಿಎಂ ಉಗ್ರಾಣ ತೆರೆಯಲು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಯಿಂದ ಅನುಮತಿ ನೀಡಿದ ಮೇರೆಗೆ ಆ.13ರಂದು ಉಗ್ರಾಣದ ಬಾಗಿಲು ತೆರೆಯಲಾಗುವುದು.
ಮಂಗಳವಾರ ಮಾಲೂರು ಕ್ಷೇತ್ರಕ್ಕೆ ಸಂಬಂಧಿಸಿದ ಭದ್ರತಾ ಕೊಠಡಿ ತೆರೆಯಲು ತಯಾರಿ ಮಾಡಲಾಗಿದ್ದು, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಮತ ಎಣಿಕೆ ಮಾಡಲು ಸಿದ್ಧತೆ ಮಾಡಲಾಗಿದೆ. ಕೋಲಾರ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಅಕ್ರಂ ಪಾಷಾ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆಯಲಿದೆ.
ಮತ ಎಣಿಕೆ ಸಂದರ್ಭದಲ್ಲಿ ಸಂಗ್ರಹಿಸಿಟ್ಟಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲಾಗುವುದು. ಅಂದು ಸ್ಥಳದಲ್ಲಿ ಹಾಜರಿರುವಂತೆ ಬಿಜೆಪಿ, ಕಾಂಗ್ರೆಸ್, ಬಿಎಸ್‌ಪಿ, ಸಿಪಿಎಂ, ಆಮ್ ಆದ್ಮಿ ಪಾರ್ಟಿ, ಜೆಡಿಎಸ್ ಸೇರಿದಂತೆ ಎಲ್ಲರಿಗೂ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ.
2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೆ.ವೈ.ನಂಜೇಗೌಡ 50,955 ಮತ ಹಾಗೂ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕೆಎಸ್ ಮಂಜುನಾಥ್ ಗೌಡ 50,707 ಮತ ಗಳಿಸಿದ್ದರು. ಕಾಂಗ್ರೆಸ್ ಪಕ್ಷದ ನಂಜೇಗೌಡ ಕೇವಲ 248 ಮತಗಳಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆ ಬಳಿಕ ಮರು ಮತಎಣಿಕೆ ಕೋರಿ ಪರಾಜಿತ ಅಭ್ಯರ್ಥಿ ಮಂಜುನಾಥ್ ಗೌಡ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ನ್ಯಾಯಾಲಯದ ಸೂಚನೆಯಂತೆ ಆ.13ರಂದು ಮರು ಮತ ಎಣಿಕೆ ನಡೆಯಲಿದೆ.