ಮಂಗಳೂರು (ಬೆಂಗಳೂರು): ಮುಡಾ ಬದಲಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಅಧಿಕಾರ ದುರ್ಬಳಕೆ ಮತ್ತು ಭ್ರಷ್ಟಾಚಾರ ನಡೆಸಿರುವ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿರುವ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಆ.29ಕ್ಕೆ ಮುಂದೂಡಿದೆ. ಆ.29ರವರೆಗೆ ಸಿಎಂ ವಿರುದ್ಧ ಯಾವುದೇ ಕೆಳ ನ್ಯಾಯಾಲಯಗಳು ವಿಚಾರಣೆ ನಡೆಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.
ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಅರ್ಜಿ ವಿಚಾರಣೆ ನಡೆಸಿದ್ದು, ಸಿಎಂ ಪರವಾಗಿ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ವಾದ ಮಂಡಿಸಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿದೆ. ಈ ಮೂಲಕ ಶಾಸನಬದ್ಧ ಆದೇಶಗಳನ್ನು ಉಲ್ಲಂಘಿಸಲಾಗಿದೆ. ಸಚಿವ ಸಂಪುಟದ ಸಲಹೆಯನ್ನು ರಾಜ್ಯಪಾಲರು ನಿರಾಕರಿಸಿದ್ದಾರೆ. ಯಾವ ಕಾರಣಕ್ಕೆ ಅನುಮತಿ ನೀಡಲಾಗಿದೆ ಎಂಬ ಅಂಶವನ್ನೇ ಅವರು ಇನ್ನೂ ವಿವರಿಸಿಲ್ಲ. ಇದು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಕೂಡಿದೆ. ಹಾಗಾಗಿ, ಈ ಅನುಮತಿ ರಾಜಕೀಯ ದುರುದ್ಧೇಶಗಳಿಂದ ಕೂಡಿದೆ ಎಂದು ಪರಿಗಣಿಸಬೇಕು ಎಂದು ಸಿಂಘ್ವಿ, ವಾದ ಮಂಡಿಸಿದರು. ಈ ಸಂದರ್ಭದಲ್ಲಿ ನ್ಯಾಯಪೀಠ, ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪಾತ್ರವಿಲ್ಲವೇ ಎಂದು ಪ್ರಶ್ನಿಸಿತು.
ಇದಕ್ಕೆ ವಕೀಲ ಸಿಂಘ್ವಿ, ನಿವೇಶನಗಳ ಬದಲಿ ಹಂಚಿಕೆ ಮಾಡಿರುವ ಪ್ರಕ್ರಿಯೆ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದೆ. ಸಿದ್ದರಾಮಯ್ಯ ವಿರುದ್ದ ಯಾವುದೇ ದಾಖಲೆಗಳು ಕಂಡು ಬಂದಿಲ್ಲ, ಮತ್ತದರಲ್ಲಿ ಅವರ ಪಾತ್ರವಿಲ್ಲ. ಬಿಎನ್ ಎಸ್ ಎಸ್ ಸೆಕ್ಷನ್ 218ರ ಅಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಆದರೆ, ಈ ಸೆಕ್ಷನ್ ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕಾದಲ್ಲಿ ನಿರ್ಧಿಷ್ಟ ಅಪರಾಧವನ್ನು ಒಳಗೊಂಡಿರಬೇಕು ಮತ್ತು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಇದು ನಡೆದಿರಬೇಕು ಎಂದು ವಾದಿಸಿದ್ದಾರೆ.
ಅಬ್ರಾಹಂ ದೂರು ಸಲ್ಲಿಸಿದ ದಿನವೇ ರಾಜ್ಯಪಾಲರು ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ರಾಜ್ಯಪಾಲರ ಮುಂದೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸುಮಾರು 12 ಅರ್ಜಿಗಳು ಬಾಕಿಯಿವೆ. ಇವೆಲ್ಲನ್ನು ಬಿಟ್ಟು ದೂರು ಕೊಟ್ಟ ತಕ್ಷಣದಲ್ಲಿ ನೋಟಿಸಿ ನೀಡಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ವಾದ ಮಂಡಿಸಿದ್ದಾರೆ.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಆ.29ಕ್ಕೆ ಮುಂದೂಡಿದೆ ಮತ್ತು ಆ.29ರ ವರೆಗೆ ಕೆಳ ನ್ಯಾಯಾಲಯಗಳಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಚಾರಣೆ ತೀರ್ಪು ನೀಡುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಹೈಕೋರ್ಟ್‌ನಲ್ಲಿ ಮುಂದಿನ ವಿಚಾರಣೆಯ ದಿನಾಂಕದವರೆಗೆ ರಾಜ್ಯಪಾಲರ ಅನುಮತಿಯ ಆಧಾರದ ಮೇಲೆ ಸಿದ್ದರಾಮಯ್ಯ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಂತೆ ಉಚ್ಛ ನ್ಯಾಯಾಲಯವು ವಿಚಾರಣಾ ನ್ಯಾಯಾಲಯಗಳಿಗೆ ಸೂಚಿಸಿದೆ.