ಖೋಟಾ ನೋಟು ಚಲಾವಣೆ ಯತ್ನ- ಆರೋಪಿಗಳ ಬಂಧನ

ಮಂಗಳೂರು: ಯೂಟ್ಯೂಬ್ ನೋಡಿ ಕಲಿತು ಕೇರಳದಲ್ಲಿ ಖೋಟಾ ನೋಟು ಮುದ್ರಿಸಿ ಮಂಗಳೂರಿನಲ್ಲಿ ಚಲಾವಣೆ ಮಾಡುತ್ತಿದ್ದ ಆರೋಪದಲ್ಲಿ ಬೆಳಿಯೂರುಕಟ್ಟೆ ನಿವಾಸಿ ಸಹಿತ ನಾಲ್ವರ ತಂಡವೊಂದನ್ನು ಬಂಽಸಿರುವ ಮಂಗಳೂರು ಸಿಸಿಬಿ ಪೊಲೀಸರು ಅವರಿಂದ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳಿಯೂರುಕಟ್ಟೆಯ ಅಯೂಬ್ ಖಾನ್(51ವ.)ಹಾಗೂ ಕಾಸರಗೋಡಿನ ಕೊಳತ್ತೂರು ನಿವಾಸಿ ವಿ.ಪ್ರಿಯೇಶ್(38ವ.),ಮಲ್ಲ ಗ್ರಾಮದ ಮುಳಿಯಾರು ವಿನೋದ್ ಕುಮಾರ್ ಕೆ.,(33ವ.) ಹಾಗೂ ಪೆರಿಯದ ಕುನಿಯಾ ವಡಂಕುರದ ಅಬ್ದುಲ್ ಖಾದರ್ (58ವ.)ಬಂಧಿತ ಆರೋಪಿಗಳು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ 500 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ಮುದ್ರಿಸಿ ಮಂಗಳೂರು ನಗರದ ಕ್ಲಾಕ್ ಟವರ್ ಪರಿಸರದ ಲಾಡ್ಜ್‌ವೊಂದರ ಪರಿಸರದಲ್ಲಿ ಚಲಾವಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ 500 ರೂ. ಮುಖಬೆಲೆಯ ಖೋಟಾ ನೋಟು ಚಲಾವಣೆ ಜಾಲದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತರಿಂದ 2,15,500 ರೂ. ಮೌಲ್ಯದ 500 ರೂ.ಮುಖಬೆಲೆಯ 427 ಖೋಟಾ ನೋಟುಗಳು, ಹಾಗೂ 4 ಮೊಬೈಲ್ ಪೋನುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಮಿಷನರ್ ಮಾಹಿತಿ ನೀಡಿದರು.

ಯೂ ಟ್ಯೂಬ್ ಮೂಲಕ ನೋಡಿ ತಯಾರಿ:
ಆರೋಪಿ ಪ್ರಿಯೇಶ್ ಕಾಸರಗೋಡು ಜಿಲ್ಲೆಯ ಚೆರ್ಕಳದಲ್ಲಿನ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಈ ಖೋಟಾ ನೋಟುಗಳನ್ನು ತಯಾರಿಸುತ್ತಿದ್ದ.ಈ ಖೋಟಾ ನೋಟುಗಳನ್ನು ತಯಾರಿಸಲು ಬೇಕಾದ ಕಚ್ಚಾ ಸಾಮಗ್ರಿಗಳನ್ನು ಕೋಝೀಕೋಡ್ ಮತ್ತು ದಿಲ್ಲಿಯಿಂದ ಖರೀದಿಸಿಕೊಂಡು ಈ ಖೋಟಾ ನೋಟುಗಳನ್ನು ತಯಾರಿಸುವ ವಿಧಾನವನ್ನು ಯೂಟ್ಯೂಬ್ ಮೂಲಕ ವೀಕ್ಷಿಸಿ, ಸುಲಭವಾಗಿ ಹಣವನ್ನು ಸಂಪಾದನೆ ಮಾಡುವ ಉದ್ದೇಶದಿಂದ ಈ ಕೃತ್ಯವನ್ನು ಎಸಗಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಸಾಲದ ಸುಳಿಗೆ ಸಿಲುಕಿದ್ದ ಪ್ರಿಯೇಶ್ ಖೋಟಾ ನೋಟುಗಳನ್ನು ತಯಾರಿಸುವ ವಿಧಾನವನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಿದ್ದ.ಸುಲಭದಲ್ಲಿ ಹಣ ಸಂಪಾದಿಸುವ ಉದ್ದೇಶದಿಂದ ನಾಲ್ಕು ತಿಂಗಳಿನಿಂದ ಈ ಕೃತ್ಯದಲ್ಲಿ ತೊಡಗಿದ್ದ.ಆತನಿಗೆ ವಿನೋದ್ ಪರಿಚಯವಿತ್ತು.ವಿನೋದ್ ಮೂಲಕ ಅಬ್ದುಲ್ ಖಾದರ್ ಹಾಗೂ ಆತನ ಮೂಲಕ ಆಯೂಬ್ ಖಾನ್ ಪರಿಚಯವಾಗಿದ್ದರು.ಆರೋಪಿಗಳು ಖೋಟಾ ನೋಟುಗಳನ್ನು ಪ್ರಿಯೇಶ್‌ನಿಂದ ತರಿಸಿಕೊಂಡು ನಗರದಲ್ಲಿ ಚಲಾವಣೆ ಮಾಡಲು ಯತ್ನಿಸಿದ್ದರು.ಪ್ರಿಯೇಶ್ ರೂ.25 ಸಾವಿರ ಪಡೆದು ಪ್ರತಿಯಾಗಿ ರೂ.500 ಮುಖ ಬೆಲೆಯ 1 ಲಕ್ಷದ ಖೋಟಾ ನೋಟು ನೀಡಲು ಒಪ್ಪಿದ್ದ.ಈ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆ ಇದ್ದು ಈ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಲಿದ್ದೇವೆ ಎಂದರು.ಖೋಟಾ ನೋಟುಗಳು ಅಸಲಿ ನೋಟಿನಂತೆಯೇ ತೋರುತ್ತಿದ್ದು ಬರಿಗಣ್ಣಿನಲ್ಲಿ ಪತ್ತೆಹಚ್ಚುವುದು ಬಹಳ ಕಷ್ಟ.ಗುಣಮಟ್ಟದ ಕಾಗದ ಹಾಗೂ ಶಾಯಿಯನ್ನು ಬಳಸಿ ಅವುಗಳನ್ನು ಮುದ್ರಿಸಲಾಗಿದೆ.ನೋಟು ಎಣಿಸುವ ಯಂತ್ರಗಳಿಂದ ಮಾತ್ರ ಅವುಗಳನ್ನು ಪತ್ತೆ ಹಚ್ಚಬಹುದು ಎಂದು ತಿಳಿಸಿದರು.ಆರೋಪಿಗಳು ಈ ಖೋಟಾ ನೋಟುಗಳನ್ನು ಕೇರಳದಿಂದ ತಯಾರಿಸಿಕೊಂಡು ತಂದು ಮಂಗಳೂರು ನಗರದಲ್ಲಿ ಚಲಾವಣೆ ಮಾಡಲು ಯತ್ನಿಸುತ್ತಿದ್ದರು ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

 

 

 

 

 

LEAVE A REPLY

Please enter your comment!
Please enter your name here