ಮಂಗಳೂರು: ಪ್ರಸ್ತುತ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ರಾಜ್ಯಪಾಲರು ಬಿಜೆಪಿ ಅಧ್ಯಕ್ಷರಂತೆ ಕೆಲಸ ಮಾಡುತ್ತಿದ್ದಾರೆಂದು ಅನ್ನಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಆ.20ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ರಾಜ ಭವನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಂವಿಧಾನದ ಚೌಕಟ್ಟಿನಲ್ಲಿರುವ ರಾಜ್ಯಪಾಲ ಹುದ್ದೆಯಲ್ಲಿರುವವರು, ತಮ್ಮ ಚೌಕಟ್ಟನ್ನು ಬಿಟ್ಟು ಬಿಜೆಪಿ ನಿರ್ದೇಶನದಂತೆ ಕೆಲಸ ಮಾಡಲು ಆಗುವುದಿಲ್ಲ ಎಂದರು.
ಈ ಹಿಂದೆ ಬಿಜೆಪಿ ಆಪರೇಷನ್ ಕಮಲದ ಮೂಲಕ ಸರ್ಕಾರ ಕೆಡವಿತ್ತು. ಈಗ ಇನ್ನೊಂದು ರೀತಿಯ ವಾಮಮಾರ್ಗದ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ಸಿದ್ದರಾಮಯ್ಯ ಮೇಲೆ ಮಾಡುತ್ತಿರುವ ಆರೋಪ ಕಪೋಲಕಲ್ಪಿತವಾಗಿದೆ ಎಂದರು.
ರಾಜ್ಯಪಾಲರು ಹಿಂದೆ ರಾಜಕಾರಣಿ ಆಗಿದ್ದವರು, ಅವರನ್ನು ನಾನು ಹತ್ತಿರದಿಂದ ಬಲ್ಲೆ. ಬಿಜೆಪಿಯವರಿಗೆ ದಲಿತರ ಮೇಲೆ ಪ್ರೀತಿ ಇದ್ದರೆ ಸಂವಿಧಾನ ಬದಲಾವಣೆ ಬಗ್ಗೆ ಯಾಕೆ ಮಾತನಾಡುತ್ತಿದ್ದರು? ಎಂದು ಪ್ರಶ್ನಿಸಿದ ಅವರು, ಸಾಂವಿಧಾನಿಕ ಹುದ್ದೆಯಲ್ಲಿದ್ದವರ ಬಗ್ಗೆ ನಾವು ಮಾತನಾಡುವುದು ಸರಿಯಲ್ಲ, ಕಾನೂನು ಹೋರಾಟ ಮಾಡುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.