ಮಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಾಕಿ ಇರುವ ನೂರು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನ ಕೇಂದ್ರ ಚುನಾವಣಾ ಸಮಿತಿಯು ಸಭೆ ಏ.4ರಂದು ನಡೆದಿದೆ. ಸಭೆಯಲ್ಲಿ ಭಾಗವಹಿಸಿದ ಪಕ್ಷದ ರಾಜ್ಯ ನಾಯಕರಲ್ಲದೆ ಆಕಾಂಕ್ಷಿಗಳ ದಂಡು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಸ್ಕ್ರೀನಿಂಗ್ ಕಮಿಟಿ ಹಲವು ಸುತ್ತಿನ ಸಭೆ ನಡೆಸಿ, ಟಿಕೆಟ್ ಆಕಾಂಕ್ಷಿಗಳ ಸಭೆ ನಡೆಸಿ, ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.
ಆದರೆ ಹಲವು ಕ್ಷೇತ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಪ್ರಬಲ ಆಕಾಂಕ್ಷಿಗಳಿರುವುದು ನಾಯಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಜಾತಿವಾರು ಲೆಕ್ಕದಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದ್ದುಇಂದು ಕೂಡ ದೆಹಲಿಯಲ್ಲಿ ಸಭೆ ಮುಂದುವರಿದಿದೆ. ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳಿರುವ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕುರಿತಂತೆ ಸಭೆ ಒಮ್ಮತದ ತೀರ್ಮಾನಕ್ಕೆ ಬರುವಲ್ಲಿ ವಿಫಲವಾಗಿದೆ. ಪುತ್ತೂರು, ಮಂಗಳೂರು ದಕ್ಷಿಣ ಮತ್ತು ಮಂಗಳೂರು ಉತ್ತರದ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಮಾತುಕತೆ ಮುಂದುವರಿದಿದ್ದು ಸಂಜೆ ವೇಳೆಗೆ ಕೆಲವು ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಹೊರ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದಕ್ಕಿಂತ ಹೆಚ್ಚು ಅಕಾಂಕ್ಷಿಗಳಿರುವ ಕ್ಷೇತ್ರಗಳ ಟಿಕೆಟ್ ಗಾಗಿ ನಾಯಕರುಗಳ ಕಿತ್ತಾಟ ಸ್ವಪಕ್ಷೀಯರಿಗೆ ಬೇಸರ ತರಿಸಿದೆ. ಇಂದು ಪಟ್ಟಿ ಬಿಡುಗಡೆಯಾಗದಿದ್ದಲ್ಲಿ ಏ.6 ಅಥವಾ 7ರಂದು ಕೆಲವು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಒಂದಿಷ್ಟು ದಿನ ವಿಳಂಬವಾಗುವ ಸಾಧ್ಯತೆಯಿದೆ. ರಾಹುಲ್ ಗಾಂಧಿಯವರ ಕೋಲಾರದ ಕಾರ್ಯಕ್ರಮವನ್ನು ಎ.10ಕ್ಕೆ ಮುಂದೂಡಲಾಗಿದೆ.