ಮಂಗಳೂರು: ಉದ್ಯಮಿಯೊಬ್ಬರ ದೊಡ್ಡ ಪ್ರಮಾಣದ ದೇಣಿಗೆಯಿಂದ ಕೇದಾರನಾಥ ದೇವಸ್ಥಾನದ ಗರ್ಭಗುಡಿಗೆ ಚಿನ್ನದ ಹೊದಿಕೆ ಕಾಮಗಾರಿ ನಡೆದಿತ್ತು. ಆದರೆ ಅಲ್ಲಿ ಚಿನ್ನದ ಬದಲು ಹಿತ್ತಾಳೆಯ ಹೊದಿಕೆ ಹೊದಿಸಲಾಗಿದೆ ಎಂದು ಅಲ್ಲಿನ ಹಿರಿಯ ಅರ್ಚಕರು ಹಾಗೂ ಚಾರ್ ಧಾಮ್ ಮಹಾಪಂಚಾಯತ್ ಉಪಾಧ್ಯಕ್ಷರೂ ಆಗಿರುವ ಸಂತೋಷ್ ತ್ರಿವೇದಿ ಆರೋಪಿಸಿದ್ದಾರೆ.
ಉದ್ಯಮಿಯೊಬ್ಬರು ಕೇದಾರನಾಥ ದೇವಾಲಯಕ್ಕೆ 230 ಕೆಜಿ ಚಿನ್ನವನ್ನು ದೇಣಿಗೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ದೇವಾಲಯದ ಗರ್ಭಗುಡಿಯೊಳಗಿನ ಚಿನ್ನದ ಪದರದ ಕೆಲಸಕ್ಕೆ ಉದ್ಯಮಿ ನೀಡಿದ ಚಿನ್ನವನ್ನು ಬಳಸಲು ನಿರ್ಧರಿಸಲಾಗಿತ್ತು. ಆದರೆ ಚಿನ್ನದ ಲೇಪನ ಬದಲು ಹಿತ್ತಾಳೆ ಲೇಪನ ಮಾಡಲಾಗಿದ್ದು ಸುಮಾರು 125 ಕೋಟಿ ರೂಪಾಯಿ ಮೌಲ್ಯದ ಹಗರಣ ನಡೆದಿದೆ ಎಂದು ಸಂತೋಷ್ ತ್ರಿವೇದಿ ಗಂಭೀರ ಆರೋಪ ಮಾಡಿದ್ದು ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳದಿದ್ದರೆ ಆಂದೋಲನ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.
ಆದರೆ ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಅರ್ಚಕರ ಈ ಆರೋಪವನ್ನು ನಿರಾಕರಿಸಿದ್ದು ಅಂತಹ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಹೇಳಿದೆ. ಇದೊಂದು ರಾಜಕೀಯ “ಪಿತೂರಿ” ಎಂದು ಬಣ್ಣಿಸಿರುವ ದೇವಾಲಯ ಸಮಿತಿ ಸುಧಾರಿತ ಸೌಲಭ್ಯಗಳಿಂದಾಗಿ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ದಾಖಲೆಯ ಏರಿಕೆಯಾಗಿದೆ. ಇದರಿಂದ ಸಂತೋಷವಾಗದ ಜನ ಈ ರೀತಿಯ ಪಿತೂರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.
ಇಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎಂಬುದು ತನಿಖೆಯಿಂದ ಹೊರಬರಬೇಕಿದೆ.