ಮಂಗಳೂರು: ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಜನರನ್ನು ಕರೆದೊಯ್ಯಲು ಬಳಸಲಾಗುತ್ತಿದ್ದ ಜಲಾಂತರ್ಗಾಮಿ ಸಬ್ ಮೆರಿನ್ ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿದೆ.
ಅಮೆರಿಕದ ಕರಾವಳಿ ಕಾವಲಪಡೆಯ ಮಾಹಿತಿ ಉಲ್ಲೇಖಿಸಿ ಅಂತರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಈ ಬಗ್ಗೆ ವರದಿ ಪ್ರಕಟಿಸಿದೆ. ಜಲಾಂತರ್ಗಾಮಿಯಲ್ಲಿ ಓರ್ವ ಪೈಲೆಟ್ ಮತ್ತು ನಾಲ್ವರು ಪ್ರಯಾಣಿಕರಿದ್ದರು ಎನ್ನಲಾಗಿದೆ. 96 ಗಂಟೆ ಸಾಗರದಲ್ಲಿ ಸಂಚರಿಸುವಷ್ಟು ಇಂಧನ, ಆಮ್ಲಜನಕವನ್ನು ಅದು ಹೊಂದಿತ್ತು ಎಂದು ಅಮೆರಿಕಾದ ಕರಾವಳಿ ಕಾವಲು ಪಡೆ ಹೇಳಿದೆ. ಸಬ್ ಮೆರಿನ್ ನೊಂದಿಗೆ ಸಂವಹನ ಸಾಧ್ಯವಾಗದ ಹಿನ್ನೆಲೆಯಲ್ಲಿ ಅದು ಕಡಲಾಳದಲ್ಲಿ ಸಿಲುಕಿದೆ ಅಥವಾ ಮೇಲೆ ಬಂದಿದೆಯೇ ಎಂಬುದನ್ನು ತಿಳಿಯಲು ಆಗುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಮೆರಿಕ, ಕೆನಡಾದ ಹಡಗುಗಳು ಮತ್ತು ವಿಮಾನಗಳು ಅಮೆರಿಕದ ಕರಾವಳಿ ಕೇಫ್ ಕಾಡ್ ನ
ಪೂರ್ವಕ್ಕೆ ಸುಮಾರು 1450 ಕಿ.ಮೀ ಪ್ರದೇಶದಲ್ಲಿ 13,000 ಅಡಿ ಆಳದವರೆಗೆ ಪರಿಶೀಲನೆ ನಡೆಸುತ್ತಿದೆ ಎಂದು ಅಮೆರಿಕದ ಕರಾವಳಿ ಕಾವಲು ಪಡೆಯ ಅಡ್ಮಿರಲ್ ಜಾನ್ ಮೌಗರ್ ತಿಳಿಸಿದ್ದಾರೆ. ದೂರದ ಪ್ರದೇಶದಲ್ಲಿ ಸಬ್ ಮೆರಿನ್ ಕಣ್ಮರೆಯಾಗಿದೆ, ಈ ಪ್ರದೇಶದಲ್ಲಿ ಹುಡುಕಾಟ ನಡೆಸುವುದೇ ಒಂದು ಸವಾಲು ಎಂದು ಮೌಗರ್ ಹೇಳಿದ್ದಾರೆ. ಸಬ್ ಮೆರಿನ್ ನಲ್ಲಿರುವವರ ರಕ್ಷಣೆಗಾಗಿ ಇರುವ ಎಲ್ಲಾ ಆಯ್ಕೆಗಳನ್ನು
ಮುಕ್ತವಾಗಿಟ್ಟಿರುವುದಾಗಿ ಸಬ್ ಮೆರಿನ್ ನ ನಿರ್ವಹಣಾ ಸಂಸ್ಥೆ ತಿಳಿಸಿದೆ.
ಬ್ರಿಟಿಷ್ ಉದ್ಯಮಿ, ಹಮೀಶ್ ಹಾರ್ಡಿಂಗ್, ಪಾಕಿಸ್ತಾನಿ ಉದ್ಯಮಿ ಷಹಜದಾ ದಾವುದ್ ಮತ್ತು ಅವರ ಮಗ ಸುಲೇಮಾನ್ ಸಬ್ ಮೆರಿನ್ ನಲ್ಲಿದ್ದರು ಎಂದು ಎರಡು ಕುಟುಂಬಗಳು ತಿಳಿಸಿವೆ.