ರಷ್ಯಾದಲ್ಲಿ ಆಂತರಿಕ ಯುದ್ಧ ಪ್ರಾರಂಭವಾಗಿದೆ. ಅಧ್ಯಕ್ಷ ಪುಟಿನ್ ಬೆಂಬಲದಿಂದ ಆರಂಭವಾಗಿದ್ದ ಯೆವ್ಗೆನಿ ಪ್ರಿಗೋಜಿನ್ ನೇತೃತ್ವದ ವ್ಯಾಗ್ನರ್ ಮರ್ಸೆನರಿ ಎಂಬ ಖಾಸಗಿ ಮಿಲಿಟರಿ ಪಡೆಯು ಪುಟಿನ್ ವಿರುದ್ಧವೇ ತಿರುಗಿ ಬಿದ್ದಿದೆ.
ಈ ಪಡೆಯು ಶಸ್ತ್ರ ದಂಗೆಯನ್ನು ಆರಂಭಿಸಿದ್ದು ರಷ್ಯಾದ ಎರಡು ನಗರಗಳನ್ನು ವಶಪಡಿಸಿಕೊಂಡಿರುವುದಾಗಿ ಮತ್ತು ಮೂರು ಮಿಲಿಟರಿ ಹೆಲಿಕಾಪ್ಟರ್ ಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿದೆ. ಈ ಕುರಿತು ಪುಟಿನ್ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ವ್ಯಾಗ್ನರ್ ಸೈನಿಕರ ಶಸ್ತ್ರ ಸಜ್ಜಿತ ದಂಗೆಯು ಬೆನ್ನಿಗೆ ಇರಿತವಾಗಿದೆ, ಮತ್ತು ಪ್ರಿಗೋಜಿನ್ ರಷ್ಯಾಗೆ ದ್ರೋಹ ಮಾಡಿದ್ದಾರೆ.
ಅತಿರಂಜಿತ ಮಹತ್ವಾಕಾಂಕ್ಷೆಗಳು ಮತ್ತು ವೈಯಕ್ತಿಕ ಹಿತಾಸಕ್ತಿಗಳು ಈ ದೇಶದ್ರೋಹಕ್ಕೆ ಕಾರಣವಾಗಿದೆ. ಇದರಲ್ಲಿ ಭಾಗಿಯಾದವರು ತಕ್ಕ ಶಿಕ್ಷೆ ಅನುಭವಿಸುತ್ತಾರೆ ಎಂದು ಕಿಡಿ ಕಾರಿದ್ದಾರೆ.
ರಷ್ಯಾದ ಅಧ್ಯಕ್ಷರು ತಮ್ಮ ಭಾಷಣದ ಸಮಯದಲ್ಲಿ ತಪ್ಪು ಆಯ್ಕೆ ಮಾಡಿದ್ದಾರೆ ಮತ್ತು ದೇಶವು ಶೀಘ್ರದಲ್ಲೇ ಹೊಸ ಪ್ರಧಾನಿಯನ್ನು ಹೊಂದಲಿದೆ ಎಂದು ವ್ಯಾಗ್ನರ್ ಪಡೆ ಹೇಳಿದೆ. ಪುಟಿನ್ ಕೆಳಗಿಳಿಸುವ ಪ್ರತಿಜ್ಞೆ ಮಾಡಿರುವ ಆ ಪಡೆಯು ಸದ್ಯ ಮಾಸ್ಕೋ ನತ್ತ ತೆರಳುತ್ತಿದೆ ಎನ್ನಲಾಗಿದೆ.
ಮಾಸ್ಕೋ ದಲ್ಲಿ ರಷ್ಯಾದ ಮಿಲಿಟರಿಯು ತನ್ನ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಕಾರಣಕ್ಕಾಗಿ ನಾವು ದಂಗೆಯನ್ನು ಆರಂಭಿಸಿದ್ದೇವೆ ಎಂದು ಪ್ರಿಗೋಜಿನ್ ಹೇಳಿದ್ದಾರೆ . ನಮ್ಮ ದಾರಿಗೆ ಅಡ್ಡ ಬರುವ ಎಲ್ಲವನ್ನು ನಾಶ ಮಾಡುತ್ತೇವೆ ಎಂದಿರುವ ಅವರು ಇದು ಮಿಲಿಟರಿ ದಂಗೆಯಲ್ಲ, ಆದರೆ ನ್ಯಾಯದ ಮೆರವಣಿಗೆ ಎಂದಿದ್ದಾರೆ.ಇನ್ನೊಂದೆಡೆ ಜನತೆ ತನ್ನ ಪರ ನಿಲ್ಲುವಂತೆ ಮನವಿ ಮಾಡಿರುವ ಪುಟಿನ್, ವ್ಯಾಗ್ನರ್ ದಾಳಿಯನ್ನು ಹಿಮ್ಮೆಟ್ಟಿಸಲು ನಮ್ಮ ಸೇನೆ ಸುಸಜ್ಜಿತವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಚೆಚೆನ್ ನಾಯಕ ರಂಜಾನ್ ಕದಿರೋವ್ ಅವರು ಪುಟಿನ್ ಬೆಂಬಲಕ್ಕೆ ನಿಂತಿದ್ದು , ವ್ಯಾಗ್ನರ್ ಗುಂಪಿನ ವಿರುದ್ಧ ಹೋರಾಡಲು ಚೆಚೆನ್ ಸೈನಿಕರನ್ನು ಕಳುಹಿಸಿದ್ದಾರೆ ಎನ್ನಲಾಗಿದೆ. ಉಕ್ರೇನ್ ಈ ಬೆಳವಣಿಗೆಯನ್ನು ಗಮನಿಸುತ್ತಿದ್ದು ಒಬ್ಬರೊಬ್ಬರು ಹಣ ಮತ್ತು ಅಧಿಕಾರಕ್ಕಾಗಿ ಪರಸ್ಪರ ಕಚ್ಚಾಡುತ್ತಿದ್ದಾರೆ ಎಂದು ಹೇಳಿದೆ.
ಯೆವ್ಗನಿ ಪ್ರಿಗೋಜಿನ್ ನೇತೃತ್ವದ ವ್ಯಾಗ್ನರ್ ಮರ್ಸೆನರಿ ಎಂಬ 25000 ಖಾಸಗಿ ಮಿಲಿಟರಿ ಯೋಧರ ಪಡೆಯು 2014ರಲ್ಲಿ ಆರಂಭಗೊಂಡಿದ್ದು, ಪುಟಿನ್ ಬೆಂಬಲವಾಗಿ ಕೆಲಸ ಮಾಡಿದೆ. ಇತ್ತೀಚಿಗಿನ ಉಕ್ರೇನ್ ವಿರುದ್ಧದ ಸಂದರ್ಭದಲ್ಲಿಯೂ ಮಹತ್ವದ ಪಾತ್ರ ವಹಿಸಿದೆ ಎನ್ನಲಾಗಿದೆ. ಆದರೆ ಸದ್ಯ ಅದು ಪುಟಿನ್ ಕೆಳಗಿಳಿಸಲು ಮುಂದಾಗಿದೆ.