ಮಂಗಳೂರು (ಹಾಸನ): ಪ್ರಯಾಣಿಕರ ಅನುಕೂಲ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಶಿರಾಡಿ ಘಾಟ್ ಸುರಂಗಗಳನ್ನೊಳಗೊಂಡ ಸಂಚಾರ ಮಾರ್ಗ ನಿರ್ಮಾಣ ಮಾಡಲು ಯೋಜಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸಕಲೇಶಪುರ ತಾಲೂಕಿನ ದೋಣಿಗಾಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 75 ರ ಕಾಮಗಾರಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೋಪಯೋಗಿ ಸಚಿವರು ಒಟ್ಟು 30 ಕಿ.ಮೀ ಉದ್ದದ ಹೊಸ ಯೋಜನೆಗೆ ರೂಪುರೇಷೆ ಸಿದ್ದಪಡಿಸಲಾಗಿದೆ. ಇದರಲ್ಲಿ 3.8 ಕಿ.ಮೀ ಸುರಂಗ ಮಾರ್ಗ ಇರಲಿದೆ ಎಂದು ಮಾಹಿತಿ ನೀಡಿದರು. 10 ಕಿ.ಮೀ ಪ್ರದೇಶ ಅರಣ್ಯ ಸಂರಕ್ಷಣಾ ಕಾಯ್ದೆ ವ್ಯಾಪ್ತಿಯಲ್ಲಿದ್ದು, ಅದಕ್ಕೆ ಅರಣ್ಯ ಇಲಾಖೆಯೊಂದಿಗೆ ವ್ಯವಹರಿಸಿ ಆನೆ ಕಾರಿಡಾರ್ ಸೇರಿದಂತೆ ಪ್ರಾಣಿಗಳ ಚಲನ ವಲನಕ್ಕೆ ಯಾವುದೇ ದಕ್ಕೆ ಉಂಟಾಗದಂತೆ ಯೋಜನೆ ರೂಪಿಸಿ ಅನುಷ್ಠಾನ ಮಾಡಲಾಗುವುದು ಎಂದರು.
ಇನ್ನೂ ವಿಸ್ತೃತ ಕ್ರಿಯಾ ಯೋಜನೆ ತಯಾರಾಗಬೇಕಿದೆ. ಹಾಲಿ ಕೆಲವೆಡೆ ಪ್ರತ್ಯೇಕ ಏಕಮುಖ ಸಂಚಾರ ಮಾರ್ಗ ರೂಪಿಸುವ ಪ್ರಸ್ತಾವನೆ ಕೂಡ ಇದೆ. ಅತ್ಯಂತ ತಿರುಗುಗಳಿರುವ ಪ್ರದೇಶವಾಗಿರುವುದರಿಂದ ಬಹಳಷ್ಟು ಅಪಘಾತಗಳಾಗುತ್ತವೆ. ಹೊಸ ಯೋಜನೆಯಿಂದ ಸಮಸ್ಯೆ ಪರಿಹಾರ ಆಗುತ್ತದೆ ಅನ್ನೋದು ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಸಲಹೆಯಾಗಿದೆ ಎಂದು ಸಚಿವರು ಹೇಳಿದರು.