ಮಂಗಳೂರು (ಜೆರುಸಲೇಮ್): ಅಪಘಾತಕ್ಕೊಳಗಾಗಿ ಬೆನ್ನು ಮೂಳೆಯಿಂದ ತಲೆ ಬುರುಡೆ ಬೇರೆಯಾಗಿದ್ದ ಬಾಲಕನೊಬ್ಬನಿಗೆ ಅತ್ಯಂತ ಸಂಕೀರ್ಣವಾದ ಶಸ್ತ್ರ ಚಿಕಿತ್ಸೆ ಮಾಡಿ ಇಸ್ರೇಲ್ ವೈದ್ಯರು ಯಶಸ್ವಿಯಾಗಿದ್ದಾರೆ.
12 ವರ್ಷದ ಸುಲೇಮಾನ್ ಹಸನ್ ಎಂಬ ಬಾಲಕ ಸೈಕಲ್ ಓಡಿಸುತ್ತಿರುವಾಗ ಕಾರಿಗೆ ಡಿಕ್ಕಿ ಹೊಡೆದು ಗಂಭೀರ ಸ್ವರೂಪದ ಗಾಯವಾಗಿತ್ತು. ಅಪಘಾತದಲ್ಲಿ ಹಸನ್ ನ ತಲೆಬುರುಡೆಯು ಬೆನ್ನು ಮೂಳೆಯಿಂದ ಬೇರ್ಪಟ್ಟಿತ್ತು. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು bilateral atlanto occippital dislocation ಎಂದು ಕರೆಯಲಾಗುತ್ತದೆ.
ವೈದ್ಯರ ಪ್ರಕಾರ ಬಾಲಕನ ಕತ್ತಿನ ಬುಡದಿಂದ ತಲೆಬುರುಡೆಯು ಸಂಪೂರ್ಣವಾಗಿ ಬೇರ್ಪಟ್ಟಿತ್ತು. ಇದನ್ನು ಆಂತರಿಕ ಶಿರಚ್ಛೇದನ ಎಂದೂ ಕರೆಯುತ್ತಾರೆ. ಸುಲೇಮಾನ್ ಹಸನ್ ಅನ್ನು ಹಡಸ್ಸಾ ವೈದ್ಯಕೀಯ ಕೇಂದ್ರಕ್ಕೆ ಏರ್ ಲಿಫ್ಟ್ ಮಾಡಲಾಗಿತ್ತು. ಅಲ್ಲಿ ತುರ್ತು ಚಿಕಿತ್ಸೆ ನೀಡಿದ ಬಳಿಕ ಮೂಳೆ ತಜ್ಞರಾದ ಡಾ. ಒಹಾದ್ ಐನಾವ್ ನೇತೃತ್ವದಲ್ಲಿ ಹಲವಾರು ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು ಬಾಲಕನ ತಲೆ ಬುರುಡೆಯನ್ನು ಯಶಸ್ವಿಯಾಗಿ ಮರುಜೋಡನೆ ಮಾಡಲಾಯಿತು. ಈ ಶಸ್ತ್ರ ಚಿಕಿತ್ಸೆಯನ್ನು ಜೂನ್ ತಿಂಗಳಲ್ಲೇ ಮಾಡಲಾಗಿದ್ದರೂ ಬಾಲಕ ಸಂಪೂರ್ಣ ಗುಣಮುಖವಾಗುವವರೆಗೆ ಪರಿಶೀಲನೆ ನಡೆಸಿ ಮಾಹಿತಿ ಬಹಿರಂಗಗೊಳಿಸಲಾಗಿದೆ.
ಬಾಲಕ ಈಗ ಸಂಪೂರ್ಣ ಚೇತರಿಸಿಕೊಂಡಿದ್ದು ಯಾವುದೇ ಸಹಾಯವಿಲ್ಲದೆ ನಡೆದಾಡಬಹುದು ಎಂದು ಡಾ. ಒಹದ್ ಐನಾವ್ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು ಇದೊಂದು ಅತ್ಯಂತ ಅಪರೂಪದ ಸಂಕೀರ್ಣ ಶಸ್ತ್ರ ಚಿಕಿತ್ಸೆಯಾಗಿದ್ದು ಆಪರೇಷನ್ ಮಾಡುವವರಿಗೆ ಅನುಭವವಿರಬೇಕಾಗುತ್ತದೆ. ಅದರಲ್ಲೂ ಮಕ್ಕಳ ನರಮಂಡಲದ ಬಗ್ಗೆ ಸಂಪೂರ್ಣ ಅರಿವಿರಬೇಕಾಗುತ್ತದೆ. ನಮ್ಮಲ್ಲಿ ಅತ್ಯಂತ ನವೀನ ತಂತ್ರಜ್ಞಾನವಿದ್ದು ಇದರಿಂದ ಹಾಗೂ ವೈದ್ಯರ ಪರಿಶ್ರಮದಿಂದ ಬಾಲಕನನ್ನು ಉಳಿಸಲು ಸಾಧ್ಯವಾಯಿತು. ಕೇವಲ ಶೇಕಡ 50ರಷ್ಟು ಮಾತ್ರ ಬಾಲಕ ಬದುಕುಳಿಯುವ ಸಾಧ್ಯತೆ ಇತ್ತು ಎಂದು ಅವರು ಹೇಳಿದ್ದಾರೆ.