ಮದುವೆಯ ಹೆಸರಿನಲ್ಲಿ ವಂಚನೆ – 64 ಲ.ರೂ. ಕಳೆದುಕೊಂಡ ಮಹಿಳೆ – ಕೇಸು ದಾಖಲು

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೋರ್ವರಿಂದ 64 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ನಗರದ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಚ್ಛೇದಿತ ಮಹಿಳೆಯೋರ್ವರಿಗೆ ಮರುಮದುವೆ ಮಾಡುವ ಉದ್ದೇಶದಿಂದ ಆಕೆಯ ಸಹೋದರರು ಮುಸ್ಲಿಂ ಮ್ಯಾಟ್ರಿಮೋನಿಯಲ್‌ ಎಂಬ ಆ್ಯಪ್‌ನಲ್ಲಿ 2022ರಲ್ಲಿ ಆಕೆಯ ಪ್ರೊಫೈಲ್‌ ಹಾಕಿದ್ದು, ಅದಕ್ಕೆ ತಮಿಳುನಾಡಿನ ಪಳ್ಳಪಟ್ಟಿ ಮೂಲದ ಮೊಹಮ್ಮದ್‌ ಫ‌ರೀದ್‌ ಶೇಖ್‌ ಎಂಬಾತನ ರಿಕ್ವೆಸ್ಟ್‌ ಬಂದಿತ್ತು.

ಇನ್ನು ಮೊಹಮ್ಮದ್‌ ಶೇಖ್‌ ಮಹಿಳೆಯ ಮೊಬೈಲ್‌ ನಂಬರ್‌ ಪಡೆದು ಆಕೆಯನ್ನು ಮದುವೆಯಾಗುವುದಾಗಿ ಇಂಗಿತ ವ್ಯಕ್ತಪಡಿಸಿದ್ದ. ಆಗ ಮಹಿಳೆ ತನ್ನ ಸಹೋದರರ ಜತೆಗೆ ಮಾತನಾಡುವಂತೆ ಸೂಚಿಸಿದ್ದರು. ಅದರಂತೆ ಮೊಹಮ್ಮದ್‌ ಫ‌ರೀದ್‌ ಶೇಖ್‌ ತನ್ನ ಸಹೋದರರು ಎಂಬುದಾಗಿ ಪರಿಚಯಿಸಿ ಸಾದಿಕ್‌ ಮತ್ತು ಮುಬಾರಕ್‌ ಎಂಬ ಇಬ್ಬರನ್ನು ಮಂಗಳೂರಿನ ಕಂಕನಾಡಿಯ ರೆಸ್ಟೋರೆಂಟ್‌ಗೆ ಕರೆದುಕೊಂಡು ಬಂದಿದ್ದ. ಮಹಿಳೆಯನ್ನು ಆದಷ್ಟು ಬೇಗ ಮದುವೆ ಮಾತುಕತೆಗೆ ಮನೆಗೆ ಕರೆಸಿಕೊಳ್ಳುವುದಾಗಿ ಹೇಳಿ ಹೋಗಿದ್ದ. ಎರಡು ದಿನಗಳ ಅನಂತರ ವಾಟ್ಸ್‌ಆ್ಯಪ್‌ ನಂಬರಿನಿಂದ ಮಹಿಳೆಗೆ ಮೆಸೇಜ್‌ ಮಾಡಲು ಆರಂಭಿಸಿದ್ದ.

ನನ್ನ ಬಳಿ ಝೋಕಿ ಎಂಬ ಆ್ಯಪ್‌ ಇದ್ದು ಅದನ್ನು ನಾನೇ ತಯಾರಿಸಿದ್ದೇನೆ. ಅದನ್ನು ರಿಲಯನ್ಸ್‌ ಕಂಪೆನಿಗೆ ಮಾರಾಟ ಮಾಡಿದರೆ 25 ಕೋ.ರೂ. ಹಣ ನೀಡುತ್ತಾರೆ ಎಂದು ಹೇಳಿ ನಂಬಿಸಿ, ಅದನ್ನು ಮಾರಾಟ ಮಾಡಲು 4 ಲಕ್ಷ ರೂ. ಪ್ರೊಸೆಸಿಂಗ್‌ ಚಾರ್ಜ್‌ ನೀಡಬೇಕಾಗುತ್ತದೆ. ಅದನ್ನು ನೀನು ನೀಡು. ನಾನು ತಿಂಗಳ ಒಳಗೆ ಹಿಂದಿರುಗಿಸುತ್ತೇನೆ ಎಂದಿದ್ದ. ಅದನ್ನು ನಂಬಿದ ಮಹಿಳೆ ಹಣವನ್ನು ನೀಡಿದ್ದರು. ಅನಂತರವೂ ಆತ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಮಹಿಳೆ ಹಂತ ಹಂತವಾಗಿ 64 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದರು. ವಾಪಸ್‌ ಕೇಳಿದಾಗ ನೀಡದೆ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here