ಮಂಗಳೂರು(ಬೆಂಗಳೂರು): ತುಳುನಾಡಿನ ಗಂಡುಕಲೆ, ಸಾಂಸ್ಕೃತಿಕ ಕ್ರೀಡೆ ಕಂಬಳ ಮೊದಲ ಬಾರಿಗೆ ರಾಜ್ಯದ ರಾಜಧಾನಿಯ ಅರಮನೆ ಮೈದಾನದಲ್ಲಿ “ಬೆಂಗಳೂರು ಕಂಬಳ – ನಮ್ಮ ಕಂಬಳ” ಎಂಬ ಶೀರ್ಷಿಕೆಯೊಂದಿಗೆ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರೂ ಆಗಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ನೇತೃತ್ವದಲ್ಲಿ ನ.25 ಮತ್ತು 26ರಂದು ನಡೆಯಲಿದೆ.
ನಾಳೆ ಅ.11 ರಂದು ಕರೆಪೂಜೆ ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಲಾಗಿದೆ. ರಾಜಧಾನಿಯಲ್ಲಿ ನಡೆಯಲಿರುವ ಕಂಬಳದ ಬಗ್ಗೆ ಬೆಂಗಳೂರು ಸೇರಿದಂತೆ ರಾಜ್ಯದ ಜನತೆಯಲ್ಲಿ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿದ್ದು ಕಂಬಳ ವೀಕ್ಷಣೆಗೆ ಲಕ್ಷಾಂತರ ಜನರು ಸೇರುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ರಾಜ್ಯದ ಜನರ ನಿರೀಕ್ಷೆಗೆ ತಕ್ಕಂತೆ ಅದ್ದೂರಿಯಾಗಿ ಕಂಬಳವನ್ನು ಆಯೋಜಿಸಲು ಸಮಿತಿ ನಿರ್ಧರಿಸಿದ್ದು, ಸಿದ್ಧತೆ ಕಾರ್ಯ ಭರದಿಂದ ಸಾಗಿದೆ. ಅರಮನೆ ಮೈದಾನದಲ್ಲಿ 145 ಮೀ. ಉದ್ದದ ಕಂಬಳ ಕರೆ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಈಗಾಗಲೇ 78 ಜೋಡಿ ಕೋಣಗಳ ಮಾಲೀಕರು ಕಂಬಳದಲ್ಲಿ ಭಾಗವಹಿಸಲು ನೊಂದಣಿ ಮಾಡಿಕೊಂಡಿದ್ದು ಈ ಸಂಖ್ಯೆ ನೂರನ್ನು ದಾಟುವ ನಿರೀಕ್ಷೆ ಹೊಂದಲಾಗಿದೆ.