ಮಂಗಳೂರು/ಪುತ್ತೂರು: ನವರಾತ್ರಿ ಹಬ್ಬದ 7ನೇ ದಿನದಲ್ಲಿ ದುರ್ಗಾದೇವಿಯ ಭಯಾನಕ ರೂಪವಾದ ಕಾಳರಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ದುಷ್ಟರನ್ನು ಸಂಹಾರ ಮಾಡುವುದರಿಂದ ದುರ್ಗೆಯ ಈ ರೂಪವನ್ನು ಕಾಳರಾತ್ರಿ ಎಂದು ಕರೆಯಲಾಗುತ್ತದೆ. ಭಕ್ತರಿಗೆ ಶುಭಫಲಗಳನ್ನು ಕರುಣಿಸುವುದರಿಂದ ಕಾಳರಾತ್ರಿಯನ್ನು ಶುಭಂಕರಿ ಎಂದೂ ಕರೆಯಲಾಗುತ್ತದೆ.
ಕಾಳರಾತ್ರಿ ದೇವಿಯ ಸ್ವರೂಪ
ಕಾಳರಾತ್ರಿ ದೇವಿಯ ಬಣ್ಣವು ದಟ್ಟವಾದ ಕತ್ತಲೆಯಂತೆ ಕಪ್ಪಾಗಿರುತ್ತದೆ. ಆಕೆಯ ರೂಪವು ಮೂರು ಕಣ್ಣುಗಳನ್ನು ಹೊಂದಿದ್ದು ತಲೆಕೂದಲನ್ನು ಚೆಲ್ಲಪಿಲ್ಲಿಯಾಗಿ ಹರಡಿಕೊಂಡಿರುತ್ತಾಳೆ. ಕೊರಳಲ್ಲಿ ರುಂಡಗಳ ಮಾಲೆಯನ್ನು ಧರಿಸಿರುವ ದೇವಿಯ ರೂಪವೇ ಭಯಾನಕ. ಸಾವಿನಿಂದಲೂ ರಕ್ಷಿಸಬಲ್ಲ ಶಕ್ತಿ ಇರುವ ದೇವಿ ಭಕ್ತರ ಭಯ ಮತ್ತು ರೋಗಗಳನ್ನು ನಾಶ ಪಡಿಸುತ್ತಾಳೆ. ದೆವ್ವ, ಅಕಾಲಿಕಾ ಮರಣ, ರೋಗ, ದುಖಃ, ಎಲ್ಲಾ ರೀತಿಯ ಸಮಸ್ಯೆಗಳಿಗೆ ಈಕೆಯನ್ನು ಪೂಜಿಸುವುದರಿಂದ ಮುಕ್ತಿ ಪಡೆಯಬಹುದು.
ಕಾಳರಾತ್ರಿ ದೇವಿಯ ಪೂಜೆಯ ಮಹತ್ವ
ನಂಬಿಕೆಗಳ ಪ್ರಕಾರ ಕಾಳರಾತ್ರಿ ದೇವಿಯನ್ನು ಪೂಜಿಸುವುದರಿಂದ ಒಬ್ಬರು ಎಲ್ಲವನ್ನೂ ಸಾಧಿಸಬಲ್ಲ. ತಂತ್ರ ಮಂತ್ರದ ಸಾಧಕರು ವಿಶೇಷವಾಗಿ ಕಾಳರಾತ್ರಿಯನ್ನು ಪೂಜಿಸುತ್ತಾರೆ. ಈಕೆಯನ್ನು ಪೂಜಿಸುವ ಮೂಲಕ ವ್ಯಕ್ತಿಯು ಭಯದಿಂದ ಮುಕ್ತನಾಗುತ್ತಾನೆ. ದೇವಿ ಭಕ್ತರನ್ನು ಅಕಾಲಿಕ ಮರಣದಿಂದ ರಕ್ಷಿಸುತ್ತಾಳೆ ಎನ್ನುವ ನಂಬಿಕೆ ಇದೆ.
ಕಾಳರಾತ್ರಿ ದೇವಿಯ ಪೂಜೆ
ಕಾಳರಾತ್ರಿ ದೇವಿಗೆ ಪ್ರಿಯವಾದ ಬೆಲ್ಲವನ್ನು ನೈವೇದ್ಯವಾಗಿ ಅರ್ಪಿಸಿ ಪೂಜೆಯಲ್ಲಿ ರಾತ್ರಿ ರಾಣಿ ಹೂವುಗಳನ್ನು ಅರ್ಪಿಸಬೇಕು. ಬಳಿಕ ಸಪ್ತಶತಿ, ದುರ್ಗಾಚಾಲಿಸ್ ಮಂತ್ರವನ್ನು ಪಠಿಸಬೇಕು. ಶ್ರದ್ಧಾಭಕ್ತಿಯಿಂದ ಆರತಿ ಮಾಡಿ ಕಾಳರಾತ್ರಿ ಮಂತ್ರ ಪಠಿಸುವಾಗ ಕೆಂಪು ಬಣ್ಣದ ಆಸನ ಬಳಸುವುದು ಕೆಂಪು ಚಂದನದ ಜಪಮಾಲೆ, ರುದ್ರಾಕ್ಷಿ ಜಪಮಾಲೆ ಬಳಸುವುದು ಉತ್ತಮ. ದೇವಿಗೆ ಕೀರ್ ಅನ್ನು ನೈವೇದ್ಯ ಮಾಡುವುದು ಮತ್ತು ಆಯಾ ಋತುಮಾನಕ್ಕೆ ದೊರೆಯುವ ಹಣ್ಣುಗಳನ್ನು ಅರ್ಪಿಸಬಹುದು. ಸಂಜೆ ವೇಳೆ ಕಿಚಡಿ ನೈವೇದ್ಯ ಅರ್ಪಿಸಬೇಕು.
ಕಾಳರಾತ್ರಿ ದೇವಿಯ ಮಂತ್ರ
ಓಂ ದೇವೀ ಕಾಳರಾತ್ರೈ ನಮಃ
ಓಂ ದೇವೀ ಕಾಳರಾತ್ರೈ ನಮಃ ಎಕ್ವೇಣಿ ಜಪಕಾರ್ಣಪೂರ ನಗ್ನಾ ಖರಾಸ್ಥಿತಾ
ಲಂಬೋಸ್ಥಿತಿ ಕಾರ್ಣಿಕ ಕರ್ಣಿ ತೈಲಾಭಯಕ್ತ ಶರೀರಿಣೀ ವಂ
ಪಾದೋಲ್ಲಸಲ್ಲೋಹ್ಲತಾ ಕಂಟಕ್ಬುಷಾನಾ
ಭರ್ಧನ್ ಮೂರ್ಧಂ ಧ್ವಜಾ ಕೃಷ್ಣ ಕಾಳರಾತ್ರಿ ಭಯಂಕರಿ
ಕಾಳರಾತ್ರಿ ದೇವಿ ಕತೆ
ರಾಕ್ಷಸರಾದ ಶುಂಭ-ನಿಶುಂಭ ಮತ್ತು ರಕ್ತ ಬೀಜಾಸುರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಇದರಿಂದ ಆತಂಕಗೊಂಡ ದೇವತೆಗಳು ಶಿವನ ಬಳಿ ಕಾಪಾಡುವಂತೆ ಬೇಡಿಕೊಳ್ಳುತ್ತಾರೆ. ರಾಕ್ಷಸರನ್ನು ಸಂಹರಿಸಿ ಭಕ್ತರನ್ನು ರಕ್ಷಿಸುವಂತೆ ಶಿವನು ಪಾರ್ವತಿಯನ್ನು ಕೇಳಿಕೊಳ್ಳುತ್ತಾನೆ. ಶಿವನ ಸಲಹೆಯಂತೆ ಪಾರ್ವತಿಯು ದುರ್ಗೆಯ ರೂಪದಲ್ಲಿ ಶುಂಭ-ನಿಶುಂಭರನ್ನು ಕೊಲ್ಲುತ್ತಾಳೆ. ರಕ್ತಬೀಜಾಸುರನನ್ನು ಕೊಂದ ತಕ್ಷಣ ಆತನ ದೇಹದಿಂದ ಹೊರಬಂದ ರಕ್ತದಿಂದ ಲಕ್ಷಗಟ್ಟಲೆ ರಕ್ತಬೀಜಾಸುರರು ಉತ್ಪತ್ತಿಯಾಗುತ್ತಾರೆ. ದುರ್ಗಾದೇವಿಯು ತನ್ನ ತೇಜಸ್ಸಿನಿಂದ ಅ.27ರಂದು ಕರಾವಳಿಯಾದ್ಯಂತ ಕಾಳರಾತ್ರಿಯನ್ನು ರಚಿಸುತ್ತಾಳೆ. ದುರ್ಗಾದೇವಿಯು ರಕ್ತಬೀಜಾಸುರನನ್ನು ಕೊಂದಾಗ ಕಾಳರಾತ್ರಿಯು ಆತನ ದೇಹದಿಂದ ಹೊರಬರುತ್ತಿದ್ದ ರಕ್ತವನ್ನು ತನ್ನ ಬಾಯಿಯಲ್ಲಿ ತುಂಬಿಕೊಂಡು ಆತನನ್ನು ಸೀಳಿ ಕೊಲ್ಲುತ್ತಾಳೆ.