ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ವತಿಯಿಂದ ಆರಂಭಗೊಂಡ ‘ಮಂಗಳೂರು ದಸರಾ’ ಶೋಭಾಯಾತ್ರೆ ಸುಮಾರು 7 ಕಿ.ಮೀ. ನಗರ ಪ್ರದಕ್ಷಿಣೆಯ ಬಳಿಕ ಅ.25ರಂದು ಮುಂಜಾನೆ ಕುದ್ರೋಳಿ ಪುಷ್ಕರಣಿಯಲ್ಲಿ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳ ಜಲ ಸ್ತಂಭನದೊಂದಿಗೆ ಸಮಾಪನಗೊಂಡಿದೆ. ಕುದ್ರೊಳಿ ಕ್ಷೇತ್ರದ ಆಧುನೀಕರಣದ ರೂವಾರಿ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಉಪಸ್ಥಿತಿಯಲ್ಲಿ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳೊಂದಿಗೆ ಶೋಭಾಯಾತ್ರೆ ಮೆರವಣಿಗೆ ಆರಂಭಗೊಂಡಿತ್ತು.
ವೈಭವದ ದಸರಾ ಮೆರವಣಿಗೆ:
ನವದುರ್ಗೆಯರ ಮೆರವಣಿಗೆಯ ಜೊತೆ ಆಕರ್ಷಕ ಹುಲಿ ವೇಷದ ತಂಡಗಳು ಬೃಹತ್ ಗಾತ್ರದ ಟ್ಯಾಬ್ಲೊಗಳ ಟ್ರ ಕ್ ಗಳು, ವಿವಿಧ ಸ್ತಬ್ಧ ಚಿತ್ರಗಳು, ವಿಶೇಷವಾಗಿ ಮಂಗಳೂರಿನ ಸೌಹಾರ್ದ ಸಾರುವ ಟ್ಯಾಬ್ಲೊ ಗಮನ ಸೆಳೆದಿದೆ. ಆಕರ್ಷಕ ಕೇರಳ ದ ತ್ರಿಶೂರಿನ ಬಣ್ಣದ ಕೊಡೆಗಳು, ಬ್ಯಾಂಡ್ ಸೆಟ್ಗಳು, ಸುಮಾರು 40 ಜಾನಪದ ಕುಣಿತಗಳ ತಂಡ, ಕೇರಳ ಚೆಂಡೆವಾದನ, ಕೊಂಬು ಕಹಳೆ ದೇಶದ ಇತಿಹಾಸವನ್ನು ಬಿಂಬಿಸುವ ಸುಮಾರು 60ಕ್ಕೂ ಅಧಿಕ ಸ್ತಬ್ಧಚಿತ್ರಗಳು ಈ ದಸರಾ ಮೆರವಣಿಗೆ ಯ ವಿಶೇಷ ಆಕರ್ಷಣೆ ಯಾಗಿತ್ತು. ದೇವಾಲಯದ ಆವರಣದಲ್ಲಿ ಹುಲಿ ವೇಷಗಳ ತಂಡದಿಂದ ಪ್ರದರ್ಶನ, ವಿವಿಧ ಟ್ಯೋಬ್ಲೋಗಳು, ದೀಪಾಲಂಕಾರ ಮೆರವಣಿಗೆಗೆ ಮೆರುಗು ನೀಡಿದೆ.
ದಸರಾ ಸಂಭ್ರಮಕ್ಕೆ ಮೆರುಗು ನೀಡಿದ ಪಿಲಿನಲಿಕೆ:
ಮಿಥುನ್ ರೈ ನೇತೃತ್ವದಲ್ಲಿ ಊರ್ವ ಮೈದಾನದಲ್ಲಿ ಪಿಲಿನಲಿಕೆ ಪ್ರತಿಷ್ಠಾನದ ವತಿಯಿಂದ ದಸರಾ ಸಂದರ್ಭದಲ್ಲಿ ನಡೆದ 8ನೇ ವರ್ಷದ ಪಿಲಿನಲಿಕೆ ಸ್ಪರ್ಧೆ ಹಾಗೂ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ ನಡೆಯುತ್ತಿರುವ ದ್ವಿತೀಯ ವರ್ಷದ ‘ಕುಡ್ಲದ ಪಿಲಿ ಪರ್ಬ-2023’ ಸ್ಪರ್ಧಾಕೂಟ ಈ ಬಾರಿಯ ದಸರಾ ಸಂಭ್ರಮದಲ್ಲಿ ಜನರ ಆಕರ್ಷಣೆ ಪಡೆದಿತ್ತು.